ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 1.30 ಲಕ್ಷ ಕೋಟಿ ರೂ. ಹಗರಣ: ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ

Update: 2018-08-30 14:26 GMT

ಬೆಂಗಳೂರು, ಆ.30: ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ 1.30 ಲಕ್ಷ ಕೋಟಿ ರೂ.ಗಳ ದೊಡ್ಡ ಹಗರಣ ನಡೆದಿರುವ ಸಾಧ್ಯತೆಗಳಿವೆ ಎಂದು ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುಪಿಎ ಸರಕಾರದ ಅವಧಿಯಲ್ಲಿ 108 ರಫೇಲ್ ಯುದ್ಧ ವಿಮಾನಗಳನ್ನು ತಂತ್ರಜ್ಞಾನ ವರ್ಗಾವಣೆ ಮೂಲಕ ಸ್ಥಳೀಯವಾಗಿ ಎಚ್‌ಎಎಲ್‌ನಲ್ಲಿ ತಯಾರಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದರು. ಎಚ್‌ಎಎಲ್ ಸಂಸ್ಥೆಯು ದೇಶದ ಹಾಗೂ ಬೆಂಗಳೂರಿನ ಹೆಮ್ಮೆ. ಸುಮಾರು 30 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿಕೊಟ್ಟಿರುವ ಪ್ರತಿಷ್ಠಿತ ಸಂಸ್ಥೆಯಾಗಿದೆ. ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರವು ಆ ಒಪ್ಪಂದವನ್ನು ರದ್ದು ಪಡಿಸಿದ ಪರಿಣಾಮ ದೇಶಕ್ಕೆ 41 ಸಾವಿರ ಕೋಟಿ ರೂ.ನಷ್ಟವುಂಟಾಗಿದೆ. ಅಲ್ಲದೆ, ಎಚ್‌ಎಎಲ್‌ನ 10 ಸಾವಿರ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ದೂರಿದರು.

ರಫೇಲ್ ಯುದ್ಧ ವಿಮಾನಗಳ ತಯಾರಿಗೆ ಸಂಬಂಧಿಸಿದಂತೆ ಎಚ್‌ಎಎಲ್ ಹಾಗೂ ಫ್ರೆಂಚ್ ಸಂಸ್ಥೆಯೊಂದಿಗೆ ಮಾತುಕತೆ ಸಕಾರಾತ್ಮಕವಾಗಿ ನಡೆಯುತ್ತಿದೆ ಎಂದು 2015ರ ಎಪ್ರಿಲ್ 8ರಂದು ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹೇಳಿಕೆ ನೀಡಿದ್ದರು. ಆದರೆ, ಕೇವಲ ಎರಡು ದಿನಗಳಲ್ಲೆ ಮೋದಿ ಫ್ರಾನ್ಸ್ ಪ್ರವಾಸಕ್ಕೆ ತೆರಳಿ ಒಪ್ಪಂದವನ್ನೆ ರದ್ದುಪಡಿಸಿದರು. 2015ರ ಮಾ.28ರಂದು ನೋಂದಣಿ ಮಾಡಿಸಿದ ಅನಿಲ್ ಅಂಬಾನಿ ಒಡೆತನದ ಕಂಪೆನಿ ಈಗ ಪ್ರಮುಖ ಸ್ಥಾನ ಪಡೆದುಕೊಂಡಿದೆ ಎಂದು ಅವರು ಆರೋಪಿಸಿದರು.

ಯುಪಿಎ ಅವಧಿಯಲ್ಲಿ ಒಟ್ಟು 126 ರಫೇಲ್ ಯುದ್ಧ ವಿಮಾನಗಳ ಖರೀದಿಯ ಒಪ್ಪಂದವಾಗಿತ್ತು. ಆದರೆ, ಈಗ ಕೇವಲ 36 ಯುದ್ಧ ವಿಮಾನಗಳನ್ನು ಪಡೆಯಲಾಗುತ್ತಿದೆ. ದೇಶದ ಭದ್ರತೆಯ ಬಗ್ಗೆ ಇವರಿಗೆ ಇರುವ ಕಾಳಜಿಯೇನು? ನಮ್ಮ ಎಚ್‌ಎಎಲ್ ಸಂಸ್ಥೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿ, ಅನುಭವವಿಲ್ಲದ ಅನಿಲ್ ಅಂಬಾನಿ ಸಂಸ್ಥೆಗೆ ಮಣೆ ಹಾಕುವ ಮೂಲಕ, ಎಚ್‌ಎಎಲ್ ಅನ್ನು ನರಕಕ್ಕೆ ತಳ್ಳಿದರು. ಅಂಬಾನಿಗೆ ಸ್ವರ್ಗ ನೀಡಿದರು ಎಂದು ಜೈಪಾಲ್ ರೆಡ್ಡಿ ಟೀಕಿಸಿದರು.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಅತ್ಯಂತ ಅನನುಭವಿ ಸಂಸದೆ. ಅವರಿಗೆ ಅತ್ಯಂತ ಪ್ರಮುಖವಾದ ರಕ್ಷಣಾ ಖಾತೆಯ ಹೊಣೆಗಾರಿಕೆ ನೀಡಲಾಗಿದೆ. ಯುಪಿಎ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದಕ್ಕಿಂತ ಶೇ.9ರಷ್ಟು ಕಡಿಮೆ ಬೆಲೆ ವಿಮಾನ ಖರೀದಿಸಲಾಗುತ್ತಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಆದರೆ, ಅದರ ಬೆಲೆ ಎಷ್ಟು ಎಂಬುದನ್ನು ಮಾತ್ರ ಬಹಿರಂಗಪಡಿಸುತ್ತಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯೂ ಈ ಬಗ್ಗೆ ಮಾತನಾಡುತ್ತಿಲ್ಲ. ಈ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ಯಾಕೆ ದೇಶದ ಜನತೆಗೆ ವಾಸ್ತವಾಂಶವನ್ನು ತಿಳಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿಲ್ಲ. ಅನಿಲ್ ಅಂಬಾನಿಯು ನರೇಂದ್ರಮೋದಿ ಹಾಗೂ ಫ್ರೆಂಚ್ ಕಂಪೆನಿಯ ನಡುವೆ ಮಧ್ಯವರ್ತಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಜೈಪಾಲ್ ರೆಡ್ಡಿ ಆರೋಪಿಸಿದರು.

ನರೇಂದ್ರಮೋದಿ ಸಂವಿಧಾನವನ್ನು ಮೀರಿ ನಡೆಯುತ್ತಿದ್ದಾರೆ. ಅವರನ್ನು ಯಾರೂ ಪಶ್ನೆ ಮಾಡುವಂತಿಲ್ಲ. ಫಾನ್ಸಿನ ಸರ್ವಾಧಿಕಾರಿ ‘ಲೂಯಿ-14’ನಂತೆ ಅವರು ವರ್ತಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಜಂಟಿ ಸದನ ಸಮಿತಿ ರಚಿಸುವಂತೆ ಮಾಡಿರುವ ಮನವಿಗೆ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ಹೇಳಿದರು.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯಾದರೂ ರಫೇಲ್ ಯುದ್ಧ ವಿಮಾನಗಳ ಮೊತ್ತವನ್ನು ತಿಳಿಸಲಿ. ನಾವು ಪ್ರಶ್ನಿಸಿದರೆ ಕೇಂದ್ರ ಸರಕಾರ ನಮಗೆ ಮರು ಪಶ್ನೆ ಹಾಕುತ್ತಿದೆ. ಫ್ರೆಂಚ್ ಕಂಪೆನಿ ಫ್ರಾನ್ಸ್ ಸರಕಾರಕ್ಕೆ ಮಾಹಿತಿ ನೀಡುತ್ತದೆ. ಆದರೆ, ರಿಲಯನ್ಸ್ ಸಂಸ್ಥೆ ಹಾಗೂ ಕೇಂದ್ರ ಸರಕಾರ ಮಾತ್ರ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಜೈಪಾಲ್ ರೆಡ್ಡಿ ಕಿಡಿಗಾರಿದರು.

ತೆಲಂಗಾಣ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಪಕ್ಷದ ಸಂಘಟನೆ ತೆಲಂಗಾಣದಲ್ಲಿ ಸದೃಢವಾಗಿದ್ದು, ಜನರ ವಿಶ್ವಾಸವನ್ನು ಮತ್ತೆಗಳಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ಶಾಸಕ ಭೈರತಿ ಸುರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ, ವಕ್ತಾರ ಸೂರಜ್ ಹೆಗ್ಡೆ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಇ.ರಾಧಾಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನೋಟುಗಳ ಅಮಾನ್ಯೀಕರಣ ಹಾಗೂ ರಫೇಲ್ ಯುದ್ಧ ವಿಮಾನಗಳ ಖರೀದಿಯ ಒಪ್ಪಂದ ಬದಲಾವಣೆಯು ದೇಶದ ಇತಿಹಾಸದಲ್ಲೆ ಈ ಕೇಂದ್ರ ಸರಕಾರ ಕೈಗೊಂಡ ಅತೀದೊಡ್ಡ ತಪ್ಪು ನಿರ್ಧಾರಗಳಾಗಿವೆ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳಕ್ಕೆ ಅಬಕಾರಿ ಸುಂಕವನ್ನು ಹೆಚ್ಚಿಸುತ್ತಿರುವುದೇ ಕಾರಣ. ಅಬಕಾರಿ ಸುಂಕ ಕಡಿತ ಮಾಡಿದರೆ ತೈಲ ಬೆಲೆಯು ಕಡಿಮೆಯಾಗುತ್ತದೆ. ಅಲ್ಲದೆ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದು ಜೈಪಾಲ್ ರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News