ನಾಲೆ ನೀರು ದುರ್ಬಳಕೆ ತಡೆಗೆ ‘ವಿಚಕ್ಷಣಾ ದಳ ರಚನೆ’: ಸಚಿವ ಡಿ.ಕೆ.ಶಿವಕುಮಾರ್

Update: 2018-08-30 14:28 GMT

ಬೆಂಗಳೂರು, ಆ. 30: ನಾಲೆಗಳಿಂದ ನೀರು ದುರ್ಬಳಕೆ ತಡೆಗೆ ಶೀಘ್ರದಲ್ಲೆ ಇಂಧನ ಇಲಾಖೆ ಮಾದರಿಯಲ್ಲೆ ವಿಚಕ್ಷಣಾ ದಳ ರಚನೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನೀರಾವರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿನ ನಾಲೆ ಕೊನೆ ಭಾಗಕ್ಕೆ ಸಮರ್ಪಕವಾಗಿ ನೀರು ಹೋಗುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ನಾಲೆ ನೀರನ್ನು ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟಲಾಗುವುದು ಎಂದರು.

ವಿಚಕ್ಷಣಾ ದಳ ರಚನೆ ಸಂಬಂಧ ಶೀಘ್ರದಲ್ಲೆ ಜಲಸಂಪನ್ಮೂಲ ಇಲಾಖೆ ಹಾಗೂ ಗೃಹ ಇಲಾಖೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದ ಅವರು, ಅಣೆಕಟ್ಟುಗಳಿಂದ ಬಿಡುಗಡೆ ಮಾಡುವ ನೀರು ನಾಲೆಯ ಕೊನೆಯ ಭಾಗದ ಜನರಿಗೂ ತಲುಪಿಸಲು ಕ್ರಮ ವಹಿಸಲಾಗುವುದು ಎಂದರು.

ಮೇಕೆದಾಟು ಯೋಜನೆಗೆ ಆದ್ಯತೆ: ಮೇಕೆದಾಟು ಯೋಜನೆಗೆ ನಮ್ಮ ಸರಕಾರ ಮೊದಲ ಆದ್ಯತೆ ನೀಡಲಿದ್ದು, ಈಗಾಗಲೇ ಯೋಜನೆ ಉದ್ದೇಶದ ಬಗ್ಗೆ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಅನುಮೋದನೆ ನಿರೀಕ್ಷೆಯಲ್ಲಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಮೇಕೆದಾಟು ಯೋಜನೆಯಿಂದ ಕರ್ನಾಟಕದ ಜನರಿಗೆ ಕುಡಿಯುವ ನೀರು ದೊರೆಯಲಿದೆ. ಆದರೆ, ಇದರಿಂದ ತಮಿಳುನಾಡಿಗೆ ಸಂಕಷ್ಟ ಪರಿಸ್ಥಿತಿಯಲ್ಲಿ ಹೆಚ್ಚಿನ ಅನುಕೂಲ ಆಗಲಿದೆ. ತಮಿಳುನಾಡು ಕೂಡ ಈ ಯೋಜನೆಯನ್ನು ಒಪ್ಪಿಕೊಳ್ಳಲಿದೆ ಎಂದು ಹೇಳಿದರು.

67 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯದ ಮೇಕೆದಾಟು ಯೋಜನೆಗೆ 6 ಸಾವಿರ ಕೋಟಿ ರೂಗಳಷ್ಟು ಹಣ ಬೇಕಾಗುವ ಅಂದಾಜಿದ್ದು, ಯೋಜನೆಗೆ ಅರಣ್ಯ ಇಲಾಖೆ ಸಮ್ಮತಿ ಅಗತ್ಯವಿದೆ. ಶೇ.90ರಷ್ಟು ಭೂಮಿ ಕನಕಪುರ ಕ್ಷೇತ್ರದಲ್ಲೆ ಬರಲಿದೆ. ಹೀಗಾಗಿ ಯೋಜನೆಗೆ ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರದ ಅನುಮತಿ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಹೇಳಿದರು.

310 ಟಿಎಂಸಿ ನೀರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಸೇರಿ ಆ ಭಾಗದ ಜಲಾಶಯಗಳಿಂದ ಹೆಚ್ಚಿನ ನೀರು ಹೊರಬಿಟ್ಟಿದ್ದು, ಈವರೆಗೂ ತಮಿಳುನಾಡಿಗೆ ಒಟ್ಟು 310 ಟಿಎಂಸಿ ನೀರು ಹರಿದಿದೆ. ಆಗಸ್ಟ್ ಅಂತ್ಯಕ್ಕೆ ರಾಜ್ಯ ತಮಿಳುನಾಡಿಗೆ 82 ಟಿಎಂಟಿಯಷ್ಟು ನೀರು ಹರಿಸಬೇಕಿತ್ತು ಎಂದು ಅವರು ಸ್ಪಷ್ಟಣೆ ನೀಡಿದರು.

ವಿಚಾರ ಸಂಕಿರಣ: ನೀರಾವರಿ ಅಭಿವೃದ್ಧಿಗೆ ತಜ್ಞರು, ಹೋರಾಟಗಾರರಿಂದ ಸಲಹೆಗಳನ್ನು ಆಹ್ವಾನಿಸಿದ್ದು, ಈವರೆಗೂ ಒಟ್ಟಾರೆ 146ಮಂದಿ ಸಲಹೆ-ಅಭಿಪ್ರಾಯ ನೀಡಿದ್ದಾರೆ. ಅವುಗಳನ್ನು ಪರಿಶೀಲಿಸಿ ಶೀಘ್ರದಲ್ಲೆ ವಿಚಾರ ಸಂಕಿರಣ ನಡೆಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News