ಬಿಜೆಪಿಯಿಂದ ಜನಪರ ಚುನಾವಣಾ ಸುಧಾರಣೆ ಸಾಧ್ಯವಿಲ್ಲ: ಸಿಪಿಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ

Update: 2018-08-30 14:31 GMT

ಬೆಂಗಳೂರು, ಆ.30: ಕಾರ್ಪೊರೇಟ್ ಕಂಪೆನಿಗಳ ಗುಲಾಮನಾಗಿರುವ ಬಿಜೆಪಿಯಿಂದ ಚುನಾವಣಾ ಸುಧಾರಣೆಯನ್ನು ಜನಪರವಾಗಿ ಮಾಡಲು ಸಾಧ್ಯವಿಲ್ಲವೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅಭಿಪ್ರಾಯಿಸಿದರು.

ಗುರುವಾರ ನಗರದ ಶಾಸಕರ ಭವನದಲ್ಲಿ ಕಾಂಗ್ರೆಸ್, ಸಿಪಿಎಂ, ಜೆಡಿಎಸ್, ಜೆಡಿಯು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಆಯೋಜಿಸಿದ್ದ ‘ಭಾರತದಲ್ಲಿ ಚುನಾವಣಾ ಸುಧಾರಣೆಗಳು’ ಒಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದ ಚುನಾವಣಾ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದು ಕಾರ್ಪೊರೇಟ್ ಶಕ್ತಿಗಳು. ಚುನಾವಣೆಯಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿಯೆ ಕೋಟ್ಯಂತರ ರೂ.ಗಳನ್ನು ವ್ಯಯಿಸುತ್ತಿವೆ. ಈ ಕಾರ್ಪೊರೆಟ್ ಶಕ್ತಿಗಳಿಗೆ ಆರೆಸ್ಸೆಸ್ ಹಾಗೂ ಬಿಜೆಪಿ ಬೆನ್ನೆಲುಬಾಗಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಯ ಮೂಲ ಸಿದ್ಧಾಂತವೆ ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಜಾರಿ ಮಾಡುವುದಾಗಿದೆ. ಇದರ ಮುಂದುವರೆದ ಭಾಗವಾಗಿ ಒಂದು ಚುನಾವಣೆ ನಡೆಸಲು ಉದ್ದೇಶಿಸಿದೆ. ಬಿಜೆಪಿ ಈ ಸಿದ್ಧಾಂತವು ಒಕ್ಕೂಟ ವ್ಯವಸ್ಥೆಯನ್ನು ನಿರ್ಣಾಮ ಮಾಡುವಂತಹದ್ದೆಂದು ಅವರು ತಿಳಿಸಿದರು.

ಚುನಾವಣಾ ಸುಧಾರಣೆಗೆ ಸಂಬಂಧಪಟ್ಟಂತೆ ನೀತಿ ಆಯೋಗವು ಕೇಂದ್ರ ಸರಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದೆ. ಯಾವುದೆ ರಾಜ್ಯ ಸರಕಾರ ಅವಧಿಗೆ ಮುನ್ನವೆ ಪತನಗೊಂಡರೆ, ಉಳಿದ ಕಾಲಾವಧಿಗಷ್ಟೆ ಚುನಾವಣೆ ನಡೆಸಬೇಕು. ಇಲ್ಲವೆ ರಾಷ್ಟ್ರಪತಿ ಆಡಳಿತ ತರಬೇಕೆಂದು ತಿಳಿಸಿದೆ. ಇದು ಆಯಾ ರಾಜ್ಯ ಸಾರ್ವಭೌಮತೆಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಅವರು ಅಭಿಪ್ರಾಯಿಸಿದರು.

ಎಸ್‌ಯುಸಿಐನ ಜಿಲ್ಲಾ ಕಾರ್ಯದರ್ಶಿ ಶ್ರೀರಾಮ್ ಮಾತನಾಡಿ, ಕೇವಲ ಶೇ.30ಕ್ಕಿಂತ ಕಡಿವೆು ಮತಗಳನ್ನು ಪಡೆದಿರುವ ಪಕ್ಷಕ್ಕೆ ಆಡಳಿತ ನಡೆಸಲು ಸಾಧ್ಯ ಮಾಡಿಕೊಟ್ಟಿರುವ ಚುನಾವಣಾ ವ್ಯವಸ್ಥೆಯನ್ನು ಬದಲಾಯಿಸಿ, ಆಯಾ ಪಕ್ಷಗಳು ಪಡೆದಿರುವ ಮತಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿನಿಧಿಗಳನ್ನು ಪಾರ್ಲಿಮೆಂಟ್‌ಗೆ ಹಾಗೂ ವಿಧಾನಸಭೆಗೆ ಕಳುಹಿಸುವಂತಹ ‘ಅನುಪಾತಿಕ ಪ್ರಾತಿನಿಧ್ಯ’ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ ಎಂದು ತಿಳಿಸಿದರು.

ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವಹಿಸಿದ್ದರು. ಈ ವೇಳೆ ಸಿಪಿಐ ಮುಖಂಡ ಸಿದ್ಧನಗೌಡ ಪಾಟೀಲ್, ಜೆಡಿಯು ರಾಜ್ಯಧ್ಯಕ್ಷ ಡಾ.ಎಂ.ಪಿ.ನಾಡಗೌಡ, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿಜೆಕೆ ನಾಯರ್ ಮತ್ತಿತರರು ಭಾಗವಹಿಸಿದ್ದರು.

ಸಂವಾದದ ಮುಖ್ಯಾಂಶಗಳು

-ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ನಡೆಸಲು ಉದ್ದೇಶಿಸಿರುವ ಬಿಜೆಪಿ ಪ್ರಸ್ತಾಪವನ್ನು ವಿರೋಧಿಸುವುದು.

-ಚುನಾವಣಾ ಆಯೋಗದ ಅಧ್ಯಕ್ಷರ ಆಯ್ಕೆಯ ವೇಳೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಪ್ರತಿನಿಧಿಗಳು ಒಳ್ಳಗೊಳ್ಳಬೇಕು.

 -ಚುನಾವಣಾ ವ್ಯವಸ್ಥೆಯಲ್ಲಿ ಕಾರ್ಪೊರೇಟ್ ವ್ಯವಸ್ಥೆ ಮೂಗು ತೂರಿಸದಂತೆ ಸೂಕ್ತ ಕಾನೂನು ತರುವುದು.

-ಪಾರದರ್ಶಕ ಚುನಾವಣೆ ನಡೆಸಲು ಸರಕಾರದ ವತಿಯಿಂದಲೆ ನಿಧಿ ನಿಯೋಜನೆ ಜಾರಿ ಮಾಡುವುದು.

-ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಗಳಿಸಿರುವ ಮತಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಪಕ್ಷಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯನ್ನು ಜಾರಿ ಮಾಡುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News