ಟೀಕೆ ಟಿಪ್ಪಣಿಗೆ ಪತ್ರಕರ್ತರು ಹೆದರಬಾರದು: ಬಸವರಾಜ ಹೊರಟ್ಟಿ

Update: 2018-08-30 14:33 GMT

ಬೆಂಗಳೂರು, ಆ.30: ಸರಕಾರದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ನೀತಿ ನಿರ್ಧಾರಗಳನ್ನು ನಿರ್ಭಯದಿಂದ ವರದಿ ಮಾಡುವ ಪತ್ರಕರ್ತರು ಟೀಕೆ ಟಿಪ್ಪಣಿಗೆ ಹೆದರಬಾರದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಗುರುವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಮಾಧ್ಯಮ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲು ಮಾಧ್ಯಮ ಸಂಘಟನೆ ಬೇಕು ಎಂದರು. ಸಮಾಜದ ಸಮಸ್ಯೆಯನ್ನು ಪತ್ತೆ ಹಚ್ಚಿ ಸಮಾಜದ ಪ್ರತಿಯೊಬ್ಬರ ಕಣ್ಮುಂದೆ ತರುವಂತೆ ಮಾಡುವ ಪತ್ರಕರ್ತನಿಗೆ ಯಾವುದೇ ಸುರಕ್ಷತೆ ಇಲ್ಲದಿರುವುದು ವಿಷಾದನೀಯ. ಪತ್ರಕರ್ತರು ಸಂಘಟಿತರಾಗಿ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕಿದೆ. ಎಲ್ಲ ಪತ್ರಕರ್ತರೂ ಒಂದೆ ಕುಟುಂಬದಂತೆ, ಅವರ ಹಿತಾಸಕ್ತಿ ಕಾಯುವ ಜವಾಬ್ದಾರಿ ಪತ್ರಕರ್ತ ಸಂಘಟನೆಗಳ ಮೂಲಕ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ ಮೇಯರ್ ಸಂಪತ್ ರಾಜ್, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಸರಿ ದಾರಿಗೆ ತರುವ ಕೆಲಸದಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಎತ್ತಿ ಹಿಡಿದು, ಒಬ್ಬ ವ್ಯಕ್ತಿಯನ್ನು ನೇರವಾಗಿ ಪ್ರಶ್ನೆ ಮಾಡುವ ಮೂಲಕ ಸಮಾಜಕ್ಕೆ ಒಳ್ಳೆಯದಾಗುವಂತೆ ಮಾಡುವ ಒಂದು ಅಸ್ತ್ರ ಎಂದರು.

ನಗರದಲ್ಲಿ ಪತ್ರಕರ್ತರು ಹೆಜ್ಜೆ ಹೆಜ್ಜೆಗೂ ಆಡಳಿತದ ಕಾರ್ಯ ವೈಖರಿಯ ಟೀಕೆ ಟಿಪ್ಪಣಿ ಮಾಡುವ ಮೂಲಕ ಸದಾ ನನ್ನ ಕರ್ತವ್ಯದ ಬಗ್ಗೆ ಎಚ್ಚರಿಕೆ ಗಂಟೆಯಾಗಿದ್ದಾರೆ. ಅದೇ ರೀತಿ ನಗರದಲ್ಲಿರುವ ಹಲವು ಕಣ್ಣಿಗೆ ಕಾಣದ ಸಮಸ್ಯೆಗಳ, ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಸುತ್ತ ಸಮಾಜದ ಏಳಿಗೆಯಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಬಿ.ನಾರಾಯಣ, ಗೌರವಾಧ್ಯಕ್ಷ ಡಾ.ಬಿ.ವಿ.ನರಸಿಂಹಯ್ಯ, ಕನ್ನಡ ಪಕ್ಷದ ಅಧ್ಯಕ್ಷ ಪಿ.ಪುರುಷೋತ್ತಮ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News