ಮೈತ್ರಿ ಸರಕಾರ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ: ಸಚಿವ ಡಿ.ಕೆ.ಶಿವಕುಮಾರ್

Update: 2018-08-30 14:35 GMT

ಬೆಂಗಳೂರು, ಆ. 30: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆಡಳಿತಕ್ಕೆ ಬಂದು ನೂರು ದಿನ ಪೂರೈಸಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಉತ್ತಮ ಆಡಳಿತ ನೀಡಿದೆ. ಅತ್ಯಂತ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ಬಿಜೆಪಿ ಆರಂಭದಿಂದಲೂ ರಾಜ್ಯದಲ್ಲಿ ಎಷ್ಟೇ ಗದ್ದಲ-ಗೊಂದಲ ಸೃಷ್ಟಿಸಿದರೂ, ರೈತರ ಸಾಲಮನ್ನಾ ಮಾಡುವ ಮೂಲಕ ಮೈತ್ರಿ ಸರಕಾರ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.

ಆಮಿಷ ಗೊತ್ತು: ಬಿಜೆಪಿ ಎಲ್ಲಕ್ಕೂ ರಾಜಕಾರಣ ಮಾಡುವುದು ಬಿಡಲಿ. ಅವರು ಏನೇನೂ ಮಾಡುತ್ತಿದ್ದಾರೆ, ಯಾರ್ಯಾರಿಗೆ ಆಮಿಷವೊಡ್ಡುತ್ತಿದ್ದಾರೆಂಬುದು ನನಗೆ ಗೊತ್ತು. ಬಿಜೆಪಿಯವರು ಬಹಳ ಆತುರದಲ್ಲಿದ್ದು, ಅವರ ಯಾವ ಪ್ರಯತ್ನವೂ ಫಲ ನೀಡುವುದಿಲ್ಲ ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆ ಮುಖ್ಯ. ಸಮಯ ಬಂದಾಗ ಎಲ್ಲವನ್ನು ನಾನು ಬಹಿರಂಗ ಮಾಡುವೆ. ಈಗ ನಾನು ಮಾತನಾಡುವುದಿಲ್ಲ ಎಂದ ಅವರು, ಯಡಿಯೂರಪ್ಪ, ಶೆಟ್ಟರ್, ಶ್ರೀರಾಮುಲು ಸರಕಾರ ಬಿದ್ದು ಹೋಗಲಿದೆ ಎಂದು ವಾರ, ದಿನ, ಗಂಟೆ, ಮುಹೂರ್ತ ನಿಗದಿ ಮಾಡಿದ್ದರು. ಜತೆಗೆ ದಿನ, ನಕ್ಷತ್ರ, ಘಳಿಗೆ ಎಲ್ಲವನ್ನು ಮಾಡಿದ್ದಾರೆ. ಅವರೇನೇನು ಮಾಡ್ತಾರೋ ಮಾಡಲಿ ಎಂದು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News