ನಿಮಗೆ ಬೇರೆ ಕೆಲಸವಿಲ್ಲವೇ ?: ಪ್ರಿಯಾ ವಾರಿಯರ್ ವಿರುದ್ಧ ದೂರು ನೀಡಿದವರಿಗೆ ಸುಪ್ರೀಂ ಕೋರ್ಟ್ ತರಾಟೆ

Update: 2018-08-31 09:59 GMT

ಹೊಸದಿಲ್ಲಿ, ಆ. 31: ಮಲಯಾಳಂ ನಟಿ ಹಾಗೂ ಕಣ್ ಮಿಟುಕು ಚೆಲುವೆ ಪ್ರಿಯಾ ವಾರಿಯರ್ ಅವರ ಮುಂಬರುವ ಚಿತ್ರ ‘ಒರು ಅಡಾರ್ ಲವ್’ ಚಿತ್ರದ ಹಾಡಿಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ದಾಖಲಾದ ಪೊಲೀಸ್ ಕೇಸನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ.

ಚಲನಚಿತ್ರದ ಜನಪ್ರಿಯ ಹಾಡಿನಲ್ಲಿರುವ ಆಕೆಯ ಕಣ್ ಮಿಟುಕಿನಿಂದ ಭಾವನೆಗಳಿಗೆ ಘಾಸಿಯಾಗಿದೆ ಎಂದು ಆರೋಪಿಸಿ ಮುಖೀತ್ ಖಾನ್ ಹಾಗೂ ಝಹೀರುದ್ದೀನ್ ಆಲಿ ಖಾನ್ ದೂರು ನೀಡಿದ್ದರು.

‘‘ಯಾರೋ ಚಿತ್ರದಲ್ಲಿ ಹಾಡು ಹಾಡಿದ್ದಾರೆಂದರೆ ನಿಮಗೆ ದೂರು ದಾಖಲಿಸುವುದು ಬಿಟ್ಟು ಬೇರೆ ಕೆಲಸವಿಲ್ಲವೇ?’’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪ್ರಶ್ನಿಸಿ ದೂರುದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಕೆಯ ಉದ್ದೇಶಪೂರ್ವಕ ಕೃತ್ಯದಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ ಎಂಬ ಆರೋಪವನ್ನು ಆಕೆಯ ವಿರುದ್ಧದ ದೂರಿನಲ್ಲಿ ದಾಖಲಿಸಲಾಗಿತ್ತು. ಆದರೆ ಈ ಆರೋಪಗಳು ಆಕೆಗೆ ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಚಿತ್ರದ ಹಾಡು ಪ್ರವಾದಿ ಮುಹಮ್ಮದ್ ಮತ್ತವರ ಮೊದಲ ಪತ್ನಿ ಖದೀಜಾ ನಡುವಿನ ಪ್ರೇಮವನ್ನು ಹೊಗಳುತ್ತಿದೆ ಹಾಗೂ ಅದನ್ನು ದೂರುದಾರರು ತಪ್ಪಾಗಿ ಅರ್ಥೈಸಿದ್ದಾರೆಂದು ವಾದಿಸಿ ಪ್ರಿಯಾ ವಾರಿಯರ್ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದರು. ಉತ್ತರ ಕೇರಳದ ಮಲಬಾರ್ ಪ್ರಾಂತ್ಯದ ಮುಸ್ಲಿಮರು ಹಾಡುವ ಸಾಂಪ್ರದಾಯಿಕ ಹಾಡು ಇದಾಗಿದೆ ಎಂದೂ ಆಕೆ ಹೇಳಿದ್ದರು. ಆದರೆ ಇಸ್ಲಾಂ ಧರ್ಮದಲ್ಲಿ ಕಣ್ ಮಿಟುಕಿಗೆ ಆಸ್ಪದವಿಲ್ಲ ಎಂದು ದೂರುದಾರರು ಹೇಳಿದಾಗ ‘‘ಇದು ಕೇವಲ ಒಂದು ಹಾಡು’’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ಫೆಬ್ರವರಿ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಪ್ರಿಯಾ ವಿರುದ್ಧದ ಎಲ್ಲಾ ಪೊಲೀಸ್ ಕೇಸುಗಳನ್ನು ತಡೆ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News