ಮೆಟ್ರೋ ನಿಲ್ದಾಣಗಳ ಬಳಿ ಸೈಕಲ್ ಪಥ ನಿರ್ಮಾಣಕ್ಕೆ ಬಿಬಿಎಂಪಿ ಚಿಂತನೆ

Update: 2018-08-31 13:50 GMT

ಬೆಂಗಳೂರು, ಆ.31: ನಗರದಾದ್ಯಂತ ಟ್ರಾಫಿಕ್ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಸುಧಾರಿಸುವ ಸಲುವಾಗಿ ಬಿಬಿಎಂಪಿ ಮೆಟ್ರೋ ನಿಲ್ದಾಣಗಳ ಬಳಿಯ ರಸ್ತೆಗಳಲ್ಲಿ ಪ್ರತ್ಯೇಕ ಸೈಕಲ್ ಪಥ ನಿರ್ಮಿಸಲು ಮುಂದಾಗಿದ್ದು, ಕಬ್ಬನ್ ರಸ್ತೆಯಲ್ಲಿನ ಮೆಟ್ರೋ ನಿಲ್ದಾಣದ ಬಳಿ ಎರಡು ಕಿ.ಮೀ.ಪಥ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಎಲ್ಲ ಮೆಟ್ರೋ ನಿಲ್ದಾಣದ ಹತ್ತಿರದ ರಸ್ತೆಗಳಲ್ಲಿ ಸೈಕಲ್ ಪಥ ನಿರ್ಮಿಸಲು ಪಾಲಿಕೆ ಮುಂದಾಗಿದ್ದು, ಸಾರ್ವಜನಿಕರು ತಮ್ಮ ಮನೆಗಳಿಂದ ಹತ್ತಿರದ ಮೆಟ್ರೋ ನಿಲ್ದಾಣದವರೆಗೆ ಸುರಕ್ಷಿತವಾಗಿ ಸೈಕಲ್ ಏರಿ ಬರಲು ಅನುಕೂಲಕರ ವಾತಾವರಣ ಸೃಷ್ಟಿಸಲಾಗುತ್ತಿದೆ. ಕೊನೆ ಹಂತದ ಸಂಪರ್ಕಕ್ಕೆ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೊಸ ಯೋಜನೆ ಜಾರಿ ಮಾಡಲು 99 ಕೋಟಿ ರೂ.ಗಳು ಅವಶ್ಯಕತೆಯಿದೆ ಎಂದು ಅಂದಾಜಿಸಲಾಗಿದ್ದು, ವಿಸ್ಕೃತ ಯೋಜನಾ ವರದಿ ಸಿದ್ಧಪಡಿಸಿ, 6 ತಿಂಗಳೊಳಗಾಗಿ ಸಲ್ಲಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾಲಿಕೆ ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸೈಕಲ್ ಪಥವನ್ನು 18 ಕೋಟಿ ರೂ.ನಲ್ಲಿ ನಿರ್ಮಿಸುತ್ತಿದೆ. ಈ ಮೊದಲು 17 ಕಿ.ಮೀ ಉದ್ದದ ಸೈಕಲ್ ಪಥ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಆ ಬಳಿಕ 7ಕಿ.ಮೀಗೆ ಸೀಮಿತಗೊಳಿಸಲಾಗಿದೆ. ರಸ್ತೆ ಅಗಲೀಕರಣ ಯೋಜನೆಯಿಂದ ದೂರವನ್ನು ಕಡಿಮೆಗೊಳಿಸಲಾಗಿದೆ. ಪಾಲಿಕೆ ಸಭೆಯಲ್ಲಿ ಪಬ್ಲಿಕ್ ಸೈಕಲ್ ಶೇರಿಂಗ್ ಪ್ರಾಜೆಕ್ಟ್ ಅನುಮೋದನೆ ದೊರೆತಿದ್ದು, ಒಂದು ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News