ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ: ಎಚ್.ಡಿ.ದೇವೇಗೌಡ

Update: 2018-08-31 14:06 GMT

ಬೆಂಗಳೂರು, ಆ.31: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಶುಕ್ರವಾರ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಬ್ರಿಟೀಷ್ ಹೈಕಮಿಷನರ್ ಡೊನಾಲ್ಡ್ ಮೈಕ್ ಅಲಿಸ್ಟರ್ ಜೊತೆ ನಡೆದ ಚರ್ಚೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಲು ಜೆಡಿಎಸ್ ಹಾಗೂ ಕಾಂಗ್ರೆಸ್ ಇಬ್ಬರೂ ಸಿದ್ಧ ಇಲ್ಲ. ಆದುದರಿಂದ, ಈ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ಇಂದು ನಡೆಯುತ್ತದೆ. ಅಲ್ಲಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಎಲ್ಲ ಗೊಂದಲಗಳೆಲ್ಲ ನಿವಾರಣೆಯಾಗಿವೆ ಎಂದು ದೇವೇಗೌಡ ಹೇಳಿದರು. ಬೇರೆ ಬೇರೆ ರಾಜ್ಯಗಳಲ್ಲಿ ರಾಜಕೀಯ ವ್ಯವಸ್ಥೆ ಹೇಗಿದೆ ಎಂದು ತಿಳಿಯಲು ಬ್ರಿಟೀಷ್ ಹೈಕಮಿಷರ್ ಬರುತ್ತಾರೆ. ಕರ್ನಾಟಕದಲ್ಲಿ ಇತ್ತೀಚೆಗೆ ಕೆಲವು ಗೊಂದಲಗಳಿವೆ ಎಂದು ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿಗಳನ್ನು ಗಮನಿಸಿ ಇಲ್ಲಿಗೆ ಬಂದಿದ್ದರು. ಎಲ್ಲ ವಿಚಾರಗಳ ಬಗ್ಗೆ ಅವರು ಮಾಹಿತಿ ಪಡೆದು ಹೋಗಿದ್ದಾರೆ ಎಂದು ಅವರು ಹೇಳಿದರು.

ಆರ್.ವಿ.ದೇಶಪಾಂಡೆ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಅನ್ನೋದು ಹಳೇ ವಿಚಾರ. ಧರಂಸಿಂಗ್ ಮುಖ್ಯಮಂತ್ರಿಯಾದ ಸಂದರ್ಭದಲ್ಲೆ ಅಂತಹ ಪ್ರಸ್ತಾಪ ಬಂದಿತ್ತು. ಕುಮಾರಸ್ವಾಮಿ ಹೇಳಿದ್ದು, ದೇಶಪಾಂಡೆ ಅವರಿಗೂ ಅರ್ಹತೆ ಇದೆ ಅಂತಾ ಅಷ್ಟೇ. ಅದರಲ್ಲಿ ಅಂತಾ ವಿಶೇಷ ಏನೂ ಇಲ್ಲ ಎಂದು ದೇವೇಗೌಡ ತಿಳಿಸಿದರು.

ರಾಮಕೃಷ್ಣ ಹೆಗ್ಡೆ ಸಂಪುಟದಲ್ಲಿ ನಾನು, ದೇಶಪಾಂಡೆ ಒಟ್ಟಿಗೆ ಕೆಲಸ ಮಾಡಿದ್ದೇವೆ ಎಂದು ದೇವೇಗೌಡ ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News