ಪ್ಲಾಸ್ಟಿಕ್ ನಿಷೇಧದಿಂದ ಲಕ್ಷ ಉದ್ಯೋಗ ನಷ್ಟ; ಉದ್ಯಮ ಪ್ರಲಾಪ

Update: 2018-09-01 04:26 GMT

ಬೆಂಗಳೂರು, ಸೆ.1: ರಾಜ್ಯ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಆರ್ಥಿಕತೆಗೆ ದೊಡ್ಡ ಹಾನಿಯಾಗಿದೆ ಎಂದು ಆಪಾದಿಸಿ ಕರ್ನಾಟಕ ರಾಜ್ಯ ಪ್ಲಾಸ್ಟಿಕ್ ಅಸೋಸಿಯೇಶನ್ (ಕೆಎಸ್‌ಪಿಎ), ಸಂಬಂಧಿತ ಸಂಘ ಸಂಸ್ಥೆಗಳು ಮತ್ತು ಪ್ಲಾಸ್ಟಿಕ್ ಉದ್ಯಮದ ಕಾರ್ಮಿಕರು ಶುಕ್ರವಾರ ಫ್ರೀಡಮ್ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ತಕ್ಷಣ ಪ್ಲಾಸ್ಟಿಕ್ ನಿಷೇಧ ಹಿಂಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರದ ಕ್ರಮದಿಂದ ಒಂದು ಲಕ್ಷ ಉದ್ಯೋಗ ನಷ್ಟವಾಗಿದ್ದು, ಆರ್ಥಿಕವಾಗಿ 20 ಸಾವಿರ ಕೋಟಿ ರೂಪಾಯಿ ನಷ್ಟಕ್ಕೂ ಇದು ಕಾರಣವಾಗಿದೆ ಎನ್ನುವುದು ಉದ್ಯಮದ ಹೇಳಿಕೆ.

ತಕ್ಷಣ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಒಕ್ಕೂಟಗಳ ಹಿರಿಯ ಉಪಾಧ್ಯಕ್ಷ ಸಿ.ಆರ್.ಜನಾರ್ದನ್ ಆಗ್ರಹಿಸಿದ್ದಾರೆ. ಕರ್ನಾಟಕ 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ಲಾಸ್ಟಿಕ್ ಉತ್ಪಾದಿಸುತ್ತಿದೆ. ಈ ಪೈಕಿ ಶೇಕಡ 60ನ್ನು ಪುನರ್ ಬಳಕೆ ಮಾಡಲು ಅವಕಾಶವಿದೆ. ಪ್ಲಾಸ್ಟಿಕ್ ಚೀಲಗಳನ್ನು ಬಳಸುವಂತಿಲ್ಲ ಎಂಬ ಕಾರಣದಿಂದ ರಫ್ತು ಉದ್ಯಮಕ್ಕೂ ಹೊಡೆತ ಬಿದ್ದಿದೆ ಎಂದು ಅವರು ಹೇಳಿದ್ದಾರೆ.

ನಿಷೇಧದಿಂದಾಗಿ ಕಿರಾಣಿಯವರಿಗೂ ಭಾರಿ ಹೊಡೆತ ಬಿದ್ದಿದೆ. ಪ್ಲಾಸ್ಟಿಕ್ ನಿಷೇಧಿಸುವ ಬದಲು ಸರ್ಕಾರ, ಪರಿಸರಕ್ಕೆ ಹಾನಿಯಾಗದಂತೆ ಪ್ಲಾಸ್ಟಿಕನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News