ಏಶ್ಯನ್ ಗೇಮ್ಸ್‌ಗಾಗಿ ಶಾಲೆ ತೊರೆದ ಹರ್ಷಿತಾ ಥೋಮರ್

Update: 2018-09-01 05:58 GMT

ಹೊಸದಿಲ್ಲಿ,ಸೆ.1: ಏಶ್ಯನ್ ಗೇಮ್ಸ್‌ನಲ್ಲಿ ಸೈಲಿಂಗ್‌ನಲ್ಲಿ ಕಂಚಿನ ಪದಕವನ್ನು ಜಯಿಸಿರುವ 16ರ ಬಾಲಕಿ ಹರ್ಷಿತಾ ಥೋಮರ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಹರ್ಷಿತಾ ಈ ಸಾಧನೆಗಾಗಿ ತನ್ನ ವಿದ್ಯಾಭ್ಯಾಸವನ್ನೇ ತ್ಯಾಗವನ್ನು ಮಾಡಿದ್ದಾರೆ.

ಹರ್ಷಿತಾ ಕಳೆದ ನಾಲ್ಕು ವರ್ಷಗಳಿಂದ ಮನೆಯಿಂದ ದೂರ ಉಳಿದಿದ್ದಾರೆ. ಪ್ರತಿ ಐದು-ಆರು ತಿಂಗಳಲ್ಲಿ ಕೆಲವೇ ದಿನಗಳು ಮಾತ್ರ ಮನೆಗೆ ಹೋಗಿದ್ದಾರೆ. ಹೆತ್ತವರ ವಿರೋಧದ ನಡುವೆಯೂ ಕಳೆದ ವರ್ಷದಿಂದ ಶಾಲೆಗೆ ತೆರಳದೆ ತನ್ನ ಗಮನವನ್ನು ಸಂಪೂರ್ಣವಾಗಿ ಏಶ್ಯಾ ಗೇಮ್ಸ್ ತಯಾರಿಯತ್ತ ನೀಡಿದ್ದಾರೆ.

ಹರ್ಷಿತಾ 10ನೇ ತರಗತಿಯಲ್ಲಿ ಓದುತ್ತಿದ್ದ ಕಾರಣ ಹೆತ್ತವರು ತನ್ನ ಪುತ್ರಿ ಸೈಲಿಂಗ್‌ನಲ್ಲಿ ತೊಡಗಿಸಿಕೊಳ್ಳುವುದನ್ನು ವಿರೋಧಿಸಿದ್ದರು.

‘‘ನನಗೆ ಪ್ರತಿದಿನ ಅಭ್ಯಾಸಕ್ಕಾಗಿ 10-12 ಗಂಟೆ ಬೇಕಾಗುತ್ತಿತ್ತು. ಹಾಗಾಗಿ ನಾನು ಶಾಲೆಯನ್ನು ತೊರೆದೆ. ನನ್ನ ಈ ನಿರ್ಧಾರಕ್ಕೆ ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಕ್ರೀಡಾ ಸಚಿವರು ನನ್ನ ತಂದೆ-ತಾಯಿಯನ್ನು ಕರೆದು ಮನವರಿಕೆ ಮಾಡಿದ್ದಾರೆ. ಇದೀಗ ಅವರು ನನ್ನ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ’’ ಎಂದು ಹರ್ಷಿತಾ ಹೇಳಿದ್ದಾರೆ.

ಇದೀಗ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಜಯಿಸಿ ತವರಿಗೆ ವಾಪಸಾಗಲಿರುವ ಹರ್ಷಿತಾ 10ನೇ ತರಗತಿಯ ಪರೀಕ್ಷೆಗಾಗಿ ತಯಾರಿ ನಡೆಸಲು ನಿರ್ಧರಿಸಿದ್ದಾರೆ. ಆದರೆ, ಕೋಚ್ ಅಲೆಕ್ಸಾಂಡರ್ ಡೆನಿಸಿಯುಕ್ ಈಗಾಗಲೇ ಹರ್ಷಿತಾಗೆ ಹೊಸ ಗುರಿ ನಿಗದಿಪಡಿಸಿದ್ದಾರೆ. ಮುಂದಿನ ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು 10 ಕೆಜಿ ತೂಕ ಗಳಿಸುವಂತೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News