ಬಿಹಾರ ಲೋಕಸಭಾ ಚುನಾವಣೆ: ಸೀಟು ಹಂಚಿಕೆ ಸೂತ್ರಕ್ಕೆ ಬಿಜೆಪಿ-ಜೆಡಿಯು ಭಿನ್ನರಾಗ

Update: 2018-09-01 06:56 GMT

ಪಾಟ್ನಾ, ಸೆ.1: ಎನ್‌ಡಿಎ ಮೈತ್ರಿಕೂಟಕ್ಕೆ ಅತ್ಯಂತ ನಿರ್ಣಾಯಕವಾಗಿರುವ ಬಿಹಾರ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಯು ನಡುವೆ ಇನ್ನೂ ಒಮ್ಮತ ಮೂಡಿಲ್ಲ. ತಾನು ಕೇಳಿದಷ್ಟು ಸೀಟು ನೀಡದೇ ಇದ್ದರೆ ಏಕಾಂಗಿಯಾಗಿ ಸ್ಪರ್ಧಿಸಲು ಬಿಹಾರ ಸಿಎಂ ನಿತೀಶ್ ಕುಮಾರ್ ಬಣ ಚಿಂತಿಸುತ್ತಿದೆೆ ಎನ್ನಲಾಗಿದೆ.

 ಪ್ರಸ್ತಾವಿತ ಸೂತ್ರದ ಪ್ರಕಾರ ಬಿಹಾರದ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 20ರಲ್ಲಿ ಸ್ಪರ್ಧಿಸಿದರೆ, ಬಿಜೆಪಿಯ ಪ್ರಮುಖ ಮೈತ್ರಿಪಕ್ಷ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ(ಜೆಡಿಯು)ಕೇವಲ 12 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ರಾಮ್‌ವಿಲಾಸ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ(ಎಲ್‌ಜೆಪಿ)6 ಸೀಟುಗಳಲ್ಲಿ ಹಾಗೂ ಉಪೇಂದ್ರ ಕುಶ್ವಾಹಾ ನೇತೃತ್ವದ ರಾಷ್ಟ್ರೀಯ ಲೋಕ ಸಮತಾ ಪಕ್ಷಕ್ಕೆ (ಆರ್‌ಎಲ್‌ಎಸ್ಪಿ)2 ಸೀಟು ನೀಡಲಾಗುತ್ತದೆ.

ಸೀಟು ಹಂಚಿಕೆ ವಿಚಾರ ಅಂತಿಮವಾಗಿದೆ ಎಂಬುದನ್ನು ನಿರಾಕರಿಸಿದ ಜೆಡಿಯು ಮುಖಂಡ ಕೆಸಿ ತ್ಯಾಗಿ,‘‘ಈ ಕುರಿತ ಮಾತುಕತೆ ಈಗಲೂ ನಡೆಯುತ್ತಿದೆ. ಇಂತಹ ಅಂಕಿ-ಅಂಶ ಎಲ್ಲಿಂದ ಬಂದಿದೆಯೋ ಗೊತ್ತಿಲ್ಲ. ಇದನ್ನು ಸ್ವೀಕರಿಸಲು ಸಾಧ್ಯವೇ ಇಲ್ಲ’’ ಎಂದರು.

ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದೆ. ಕರ್ನಾಟಕದಲ್ಲಿ ಸರಕಾರ ರಚಿಸಲು ವಿಫಲವಾಗಿದೆ. ಈ ಅಂಶ ಜೆಡಿಯುಗೆ ಬಿಹಾರದ 40 ಸಂಸತ್ ಕ್ಷೇತ್ರಗಳಲ್ಲಿ ಇನ್ನಷ್ಟು ಸೀಟುಗಳನ್ನು ಕೇಳಲು ಉತ್ತೇಜನ ನೀಡಿದೆ.

"2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಜೆಡಿಯು ದೊಡ್ಡಣ್ಣನ ಪಾತ್ರವಹಿಸಲಿದೆ. 40 ಕ್ಷೇತ್ರಗಳ ಪೈಕಿ ಜೆಡಿಯು 16ರಲ್ಲಿ ಸ್ಪರ್ಧಿಸಲಿದ್ದು, 16 ಸೀಟುಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದೆ. ಉಳಿದ 8 ಸೀಟುಗಳನ್ನು ಎನ್‌ಡಿಎನ ಹಳೆಯ ಹಾಗೂ ಹೊಸ ಮೈತ್ರಿ ಪಕ್ಷಗಳಿಗೆ ಹಂಚಲಾಗುತ್ತದೆ. ರಾಮ್‌ವಿಲಾಸ್ ಪಾಸ್ವಾನ್ ಪಕ್ಷಕ್ಕೆ 6, ಮಾಜಿ ಆರ್‌ಜೆಡಿ ನಾಯಕ ಪಪ್ಪು ಯಾದವ್ ಹಾಗೂ ಕುಶ್ವಾಹಾ ಪಕ್ಷದಿಂದ ಬಂಡಾಯ ಎದ್ದಿರುವ ಅಭ್ಯರ್ಥಿಗೆ ಒಂದು ಸೀಟು ನೀಡಲಾಗುವುದು'' ಎಂದು ಜೆಡಿಯು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ವಿರೋಧಿಸಿದ್ದ ನಿತೀಶ್‌ಕುಮಾರ್ ನೇತೃತ್ವದ ಜೆಡಿಯು ಪಕ್ಷ ಎನ್‌ಡಿಎ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಆದರೆ, ಕೇವಲ 2 ಕ್ಷೇತ್ರದಲ್ಲಿ ಜಯಿಸಿತ್ತು. ಬಿಜೆಪಿ 22 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಲಾಲೂಪ್ರಸಾದ್ ಯಾದವ್‌ರ ಆರ್‌ಜೆಡಿ ಹಾಗೂ ಕಾಂಗ್ರೆಸ್ ಕ್ರಮವಾಗಿ 6 ಹಾಗೂ 2 ಸೀಟುಗಳನ್ನು ಗೆದ್ದುಕೊಂಡಿದ್ದವು.

 ‘‘ನಾವು ಕಳೆದ ಬಾರಿ 22 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದೆವು. ಈ ಬಾರಿ ಎಲ್ಲ 22 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ. ಒಂದೂ ಕ್ಷೇತ್ರವನ್ನು ತ್ಯಾಗ ಮಾಡುವ ಪ್ರಶ್ನೆಯಿಲ್ಲ’’ ಎಂದು ಬಿಜೆಪಿ ನಾಯಕನೊಬ್ಬನ ವಾದವಾಗಿದೆ.

 ‘‘ಒಂದು ವೇಳೆ ಬಿಜೆಪಿ ನಮ್ಮ ಸೂತ್ರಕ್ಕೆ ಒಪ್ಪದಿದ್ದರೆ, ಏಕಾಂಗಿಯಾಗಿ ಸ್ಪರ್ಧಿಸಲು ಸಿದ್ಧವಿದ್ದೇವೆ. ಇದೊಂದು ಲೋಕಸಭಾ ಚುನಾವಣೆ. ನಿತೀಶ್‌ಕುಮಾರ್ ಪ್ರಧಾನಮಂತ್ರಿ ಪಟ್ಟಕ್ಕಾಗಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ನಮಗಿಂತ ಬಿಜೆಪಿಯೇ ಹೆಚ್ಚು ನಷ್ಟವಾಗುತ್ತದೆ’’ ಎಂದು ನಿತೀಶ್‌ಕುಮಾರ್ ಬಣದ ಸದಸ್ಯರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News