×
Ad

ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟರೆ ಯಶಸ್ಸು: ರಾಜ್ಯಪಾಲ ವಜುಬಾಯಿ ವಾಲಾ

Update: 2018-09-01 18:52 IST

ಬೆಂಗಳೂರು, ಸೆ.1: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಬೋಧಿಸಿದ ಅಹಿಂಸಾ ತತ್ವದಲ್ಲಿ ನಂಬಿಕೆ ಇಟ್ಟರೆ, ಯಶಸ್ಸು ದೊರೆಯಲಿದೆ ಎಂದು ರಾಜ್ಯಪಾಲ ವಜುಬಾಯಿ ವಾಲಾ ಇಂದಿಲ್ಲಿ ಅಭಿಪ್ರಾಯಪಟ್ಟರು.

ಶನಿವಾರ ನಗರದ ಕುಮಾರಕೃಪಾ ಪಾರ್ಕ್‌ನ ಗಾಂಧಿನಗರ ಪ್ರೌಢಶಾಲೆಯಲ್ಲಿ ಭಾರತೀಯ ಶಿಕ್ಷಣ ಸಮಿತಿ ಆಯೋಜಿಸಿದ್ದ, ಭಾರತೀಯ ಶಿಕ್ಷಣ ಸಮಿತಿಯ ವಜ್ರ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದ ಸಾಧನೆಗೆ ಸತ್ಯಪಾಲನೆ, ಅಹಿಂಸೆಯೇ ಮೂಲಮಂತ್ರವಾಗಿದೆ. ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ, ಬಂದೂಕಿನ ಮೂಲಕ ಏನನ್ನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ನುಡಿದರು.

ಇತ್ತೀಚಿಗೆ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳನ್ನು ಅಂಕಗಳಿಸಲೆಂದೇ ತಯಾರು ಮಾಡುತ್ತಿದ್ದಾರೆ. ಇಂತಹ ವಾತಾವರಣ ನಮಗೆ ಅಗತ್ಯವಿಲ್ಲ. ಬದಲಾಗಿ, ಶಿಕ್ಷಣ, ಸಂಸ್ಕೃತಿ ಪ್ರತಿಯೊಬ್ಬರಿಗೂ ಮುಟ್ಟಿಸುವ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಗಳು ಮುಂದಾಗಬೇಕಿದೆ. ಅದು ಅಲ್ಲದೆ, ಮಕ್ಕಳು ಶಾಲೆಗೆ ಚಿನ್ನವಾಗಿ ಬರುತ್ತಾರೆ. ಅವರನ್ನು ಶಾಲೆಯಿಂದ ಹೊರ ಕಳುಹಿಸುವಾಗ ಚಿನ್ನದ ಗಟ್ಟಿಗಳನ್ನಾಗಿ ಮಾರ್ಪಾಡು ಮಾಡವಂತಹ ಕೆಲಸ ನಡೆಯಬೇಕು ಎಂದು ಹೇಳಿದರು.

ಶಿಕ್ಷಣ ಪಡೆಯುವುದರಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಲು ಸಹಕಾರಿಯಾಗಲಿದೆ. ಜೊತೆಗೆ, ಜೀವನದ ಅಂಧಕಾರವನ್ನು ತೊಡೆದು ಬದುಕಿನಲ್ಲಿ ಹೊಸದಿಕ್ಕು ದಿಸೆಯತ್ತ ಹೋಗಲು ನೆರವಾಗಲಿದೆ ಎಂದ ಅವರು, ಶಿಕ್ಷಣ ಪಡೆಯುವುದರಿಂದ ಬರೀ ವೈಯಕ್ತಿಕವಾಗಿ ಅಷ್ಟೇ ಅಲ್ಲ, ರಾಷ್ಟ್ರದ ಅಭಿವೃದ್ಧಿಗೂ ಮಹತ್ವದ ಪಾತ್ರವಹಿಸಲು ನೆರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ವಿ.ಚಾರ್ಲ್ಸ್ ಲೋಬೋ, ಕಾಲೇಜು ಸಮಿತಿಯ ಅಧ್ಯಕ್ಷ ಪ್ರೊ.ಬಿ.ಆರ್.ಶೇಷಾದ್ರಿ ಅಯ್ಯಂಗಾರ್, ಮುಖ್ಯಶಿಕ್ಷಕಿ ಆರ್.ಹೇಮಲತಾ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News