ವಸೂಲಿ ಆರೋಪ: ಕನ್ನಡ ಪರ ಸಂಘಟನೆ ಕಾರ್ಯಕರ್ತರ ಸೆರೆ

Update: 2018-09-01 13:52 GMT

ಬೆಂಗಳೂರು, ಸೆ.1: ಕರ್ನಾಟಕ ಪ್ರಜಾಶಕ್ತಿ ಸಮಿತಿ ಸಂಘಟನೆ ಹೆಸರಿನಲ್ಲಿ ಅಕ್ರಮ ಕೂಟ ಕಟ್ಟಿಕೊಂಡು ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಚಂದನ್(26), ಗಗನ್‌ಗೌಡ (26), ಬಸವರಾಜು(27) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಆರೋಪಿಗಳ ತಂಡವು ಆ.30ರಂದು ಸಂಜೆ 5:30ರ ಸುಮಾರಿಗೆ ಪೇಟೆ ಚಿನ್ನಪ್ಪ ಕೈಗಾರಿಕಾ ಪ್ರದೇಶದಲ್ಲಿರುವ ಉಮೇಶ್‌ಕುಮಾರ್ ಅಗರ್ವಾಲ್ ಎಂಬುವವರ ಮಾಲಕತ್ವದ ಭಾರತ್ ಮೋನೋ ಫಿಲೋಮೆಂಟ್ ಟೆಕ್ಸ್‌ಟೈಲ್ ಕಾರ್ಖಾನೆ ನುಗ್ಗಿ ಬೆದರಿಸಿದ್ದಾರೆ ಎನ್ನಲಾಗಿದೆ.

ತಮಗೆ 50 ಸಾವಿರ ರೂ. ಕೊಡುವಂತೆ ಒತ್ತಡ ಹಾಕಿದ್ದು, ಹಣ ಕೊಡದಿದ್ದರೆ ನಿಮ್ಮ ಕಾರ್ಖಾನೆ ಮುಚ್ಚಿಸುತ್ತೇವೆ. ಅಲ್ಲದೆ, ಬೆಂಕಿ ಹಚ್ಚುತ್ತೇವೆಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಫ್ಯಾಕ್ಟರಿ ಮಾಲಕ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು.

ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಕರ್ನಾಟಕ ಪ್ರಜಾಶಕ್ತಿ ಸಂಘಟನೆಯ ಗುರುತಿನ ಚೀಟಿಗಳು, ಸಂಘಟನೆಯ ಶಾಲುಗಳು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇನ್ನು, ಈ ಸಂಬಂಧ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಕಾರ್ಯ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News