ಮಹಾಭಾರತ ಪ್ರಸ್ತುತತೆಯೊಂದಿಗೆ ಸಾಗಿಬಂದ ಮಹಾಕಾವ್ಯ: ಚಂದ್ರಶೇಖರ ಕಂಬಾರ

Update: 2018-09-01 14:01 GMT

ಬೆಂಗಳೂರು, ಸೆ.1: ರಾಜಕೀಯ ಅಂಶಗಳ ಕಾರಣದಿಂದಾಗಿ ಮಹಾಭಾರತ ಮಹಾಕಾವ್ಯವು ಯಾವತ್ತಿಗೂ ಪ್ರಸ್ತುತತೆಯನ್ನು ಪಡೆದುಕೊಳ್ಳುವ ಜಗತ್ತಿನ ಏಕೈಕ ಮಹಾಕಾವ್ಯವಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅಭಿಪ್ರಾಯಿಸಿದರು.

ಶನಿವಾರ ತೆಲುಗು ವಿಜ್ಞಾನ ಸಮಿತಿ ಹಾಗೂ ವಾಕಲಿ ಪಬ್ಲಿಷರ್ಸ್‌ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಲೇಖಕ ಹಾಗೂ ಸಂಸದ ವೀರಪ್ಪ ಮೊಯ್ಲಿರವರ ಮಹಾಭಾರತ ಮಹಾಕಾವ್ಯದ ಅನುವಾದಿತ ‘ಯಾಜ್ಞಸೇನಿ ಸಿರಿಮುಡಿ ಪರಿಕ್ರಮಣಮು’ ತೆಲುಗು ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಹಾಭಾರತ ಮಹಾಕಾವ್ಯದಲ್ಲಿರುವ ಪ್ರತಿ ಪಾತ್ರವು ವಾಸ್ತವ ಜಗತ್ತಿಗೆ ಸದಾ ಮುಖಾಮುಖಿಯಾಗುವಂತಹದ್ದು. ಹೀಗಾಗಿ ಹತ್ತು ಸಾವಿರಕ್ಕೂ ಹೆಚ್ಚು ಇತಿಹಾಸವಿರುವ ಮಹಾಭಾರತ ಮಹಾಕಾವ್ಯವನ್ನು ಇವತ್ತಿನ ಸಂದರ್ಭಕ್ಕೆ ಅನುಗುಣವಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಇಂತಹ ಮಹಾಕಾವ್ಯ ಜಗತ್ತಿನಲ್ಲಿ ಮತ್ತೆಲ್ಲೂ ಸಿಗಲಾರದು ಎಂದು ಅವರು ಹೇಳಿದರು.

ಮಹಾಭಾರತ ಮಹಾಕಾವ್ಯವು ಪ್ರಾರಂಭದಲ್ಲಿ ಸುಮಾರು 8,800 ಶ್ಲೋಕಗಳನ್ನು ಒಳಗೊಂಡಿತ್ತು. ಆದರೆ, ಅದನ್ನು ದೇಶದ ಪ್ರತಿ ಪ್ರದೇಶದ ಸಮುದಾಯವು ಮಹಾಭಾರತದ ಪಾತ್ರಗಳಿಗೂ ತಮ್ಮ ಪ್ರದೇಶಕ್ಕೂ ಸಮ್ಮಿಲನಗೊಳಿಸಿಕೊಂಡರು. ಇದರ ಪರಿಣಾಮವಾಗಿ ಮಹಾಕಾವ್ಯ 1ಲಕ್ಷ 48 ಸಾವಿರ ಶ್ಲೋಕಗಳಷ್ಟು ವಿಸ್ತಾರಗೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತವಡಿಸಿದರು.

ರಾಜಕಾರಣಿಯಾಗಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಸಂಸದ ವೀರಪ್ಪ ಮೊಯ್ಲಿ, ಮಹಾಭಾರತ ಮಹಾಕಾವ್ಯವನ್ನು ಮಹಿಳಾ ಸಬಲೀಕರಣದ ಹಿನ್ನೆಲೆಯಲ್ಲಿ ವಾಸ್ತವ ಜಗತ್ತಿಗೆ ಅನುಗುಣವಾಗಿ ರೂಪಿಸಿದ್ದಾರೆ. ಮುಖ್ಯವಾಗಿ ದ್ರೌಪದಿಯ ಮೂಲಕ ದೇಶದ ಆತ್ಮಪ್ರಜ್ಞೆಯನ್ನು ಕೆಣಕುವಂತೆ ನಿರೂಪಿಸಿರುವುದು ಗಮನಾರ್ಹವಾದದ್ದೆಂದು ಅವರು ತಿಳಿಸಿದರು.

ಮಹಾಭಾರತ ಮಹಾಕಾವ್ಯದ ಕುರಿತು ಕಬ್ಬಿನಾಲೆ ವಸಂತ ಭಾರದ್ವಾಜ ಮಾತನಾಡಿದರು. ಈ ವೇಳೆ ಸಾಹಿತಿ ಹಾಗೂ ಸಂಸದ ವೀರಪ್ಪ ಮೊಯ್ಲಿ, ಡಾ.ಶೇಷಶಾಸ್ತ್ರಿ, ಡಾ.ರಾಧಾಕೃಷ್ಣ ರಾಜು, ಡಾ.ಜಯಸೂರ್ಯ ಸದಾನಂದ ಶಾಸ್ತ್ರಿ ಹಾಗೂ ತೆಲುಗಿನ ನಟ ಡಾ.ರಾಜೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News