ಸರಳ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಐಪಿಪಿಬಿಗೆ ಚಾಲನೆ

Update: 2018-09-01 14:23 GMT

ಬೆಂಗಳೂರು, ಸೆ.1: ಬ್ಯಾಂಕಿಂಗ್ ಸೇವೆ ವಂಚಿತ ಸಾಮಾನ್ಯರಿಗೂ ಸರಳವಾಗಿ ಬ್ಯಾಂಕಿಂಗ್ ಸೇವೆ ಕಲ್ಪಿಸುವ ಅಂಚೆ ಇಲಾಖೆಯ ಭಾರತೀಯ ಅಂಚೆ ಪಾವತಿ ಬ್ಯಾಂಕ್(ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್-ಐಪಿಪಿಬಿ)ಗೆ ಚಾಲನೆ ಸಿಕ್ಕಿದೆ. 

ಕರ್ನಾಟಕದಲ್ಲಿ 31 ಜಿಲ್ಲಾ ಶಾಖೆಗಳಲ್ಲಿನ 155 ಸೇವಾ ಕೇಂದ್ರಗಳಲ್ಲಿ ಕಾರ್ಯಾರಂಭವಾಯಿತು. ಸಾಮಾನ್ಯ ಜನ ಸರಳವಾಗಿ ಕನಿಷ್ಠ ಠೇವಣಿಯಿಲ್ಲದೆ ಶೂನ್ಯ ಶುಲ್ಕದೊಂದಿಗೆ ಕೇವಲ ಆಧಾರ್, ಮೊಬೈಲ್ ಸಂಖ್ಯೆ ಆಧರಿಸಿ ಖಾತೆ ತೆರೆದು ಬ್ಯಾಂಕಿಂಗ್ ಸೇವೆ ಪಡೆಯುವ ಪರಿಕಲ್ಪನೆಯ ಸೇವೆಗೆ ಪ್ರಧಾನಿ ಮೋದಿ ಹೊಸದಿಲ್ಲಿಯಲ್ಲಿ ಶನಿವಾರ ಚಾಲನೆ ನೀಡಿದರು.

ಬೆಂಗಳೂರಿನ ಪುರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ 31 ಜಿಲ್ಲಾ ಶಾಖೆಗಳಲ್ಲಿನ 155 ಸೇವಾ ಕೇಂದ್ರಗಳಿಗೆ ಸಂಸದ ಪಿ.ಸಿ.ಮೋಹನ್ ಅವರು ಚಾಲನೆ ನೀಡಿ ಮಾತನಾಡಿದರು. ರಾಜ್ಯದ 31 ಶಾಖೆಗಳಲ್ಲಿ ಇಂದು ಪಾವತಿ ಬ್ಯಾಂಕಿಂಗ್ ಸೇವೆ ಆರಂಭವಾಗಲಿದ್ದು, ಡಿಸೆಂಬರ್ ವೇಳೆಗೆ ರಾಜ್ಯದ ಎಲ್ಲ 9000 ಸೇವಾ ಕೇಂದ್ರಗಳಲ್ಲೂ ಐಪಿಪಿಬಿ ಸೇವೆ ಶುರುವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ಐಪಿಪಿಬಿ ಹಿರಿಯ ವ್ಯವಸ್ಥಾಪಕ ಸುರೇಶ್, ಕರ್ನಾಟಕ ಅಂಚೆ ವತ್ತದ ಸಹಾಯಕ ನಿರ್ದೇಶಕ ವೆಂಕಟಾಚಲ ಭಟ್ ಉಪಸ್ಥಿತರಿದ್ದರು.

ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿ ಶಾಖೆಗಳಿದ್ದು, ಈ ಪೈಕಿ 650 ಪ್ರಮುಖ (ಜಿಲ್ಲಾ) ಶಾಖೆಗಳಲ್ಲಿ ಐಪಿಪಿಬಿ ಸೇವೆ ಶುರುವಾಗಲಿದೆ. ದೇಶಾದ್ಯಂತ 3250 ಸೇವಾ ಕೇಂದ್ರಗಳಲ್ಲಿ ಸೇವೆ ಆರಂಭವಾಗಲಿದೆ. ಐಪಿಪಿಬಿ ಖಾತೆಯಲ್ಲಿ ಗರಿಷ್ಠ 1 ಲಕ್ಷ ರೂ.ವರೆಗೆ ಠೇವಣಿಗೆ ಅವಕಾಶವಿದ್ದು, ತ್ತೈಮಾಸಿಕ ಶೇ.4ರಷ್ಟು ಬಡ್ಡಿ ಸಿಗಲಿದೆ. ಐಪಿಪಿಬಿ ಖಾತೆಯನ್ನು ಅಂಚೆ ಕಚೇರಿ ಉಳಿತಾಯ ಖಾತೆಗೆ ಜೋಡಣೆ ಮಾಡುವುದರಿಂದ 1 ಲಕ್ಷಕ್ಕಿಂತ ಹೆಚ್ಚು ಮೊತ್ತವಿದ್ದರೆ ಹೆಚ್ಚುವರಿ ಮೊತ್ತ ಉಳಿತಾಯ ಖಾತೆಗೆ ವರ್ಗಾವಣೆಯಾಗುತ್ತದೆ.

ಮನೆ ಮನೆಗೆ ತಮ್ಮ ಬ್ಯಾಂಕ್: ವಿಮಾನಯಾನ ಟಿಕೆಟ್, ರೈಲ್ವೆ ಟಿಕೆಟ್, ಬಸ್ ಟಿಕೆಟ್, ಬುಕ್ ಮೈ ಶೋ, ಟೆಲಿಕಾಂ ಬಿಲ್, ಬೆಸ್ಕಾಂ, ಜಲಮಂಡಳಿ, ಬಿಎಸ್‌ಎನ್ ಎಲ್ ಸೇರಿ ಇತರೆ ಸೇವಾ ಬಿಲ್ ಪಾವತಿಗೆ ಅವಕಾಶವಿರಲಿದೆ. ಆನ್‌ಲೈನ್ ಎನ್‌ಇಎಫ್ಟಿ, ಆರ್‌ಟಿಜಿಎಸ್, ಐಎಂಪಿಎಸ್ ಸೌಲಭ್ಯವೂ ಇದೆ. ಫಲಾನುಭವಿಗೆ ನೇರ ಪಾವತಿ (ಡಿಬಿಟಿ) ಕಾರ್ಯಕ್ಕೂ ಬಳಕೆಯಾಗಲಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಮಾಸಾಶನ, ಸಹಾಯಧನ, ಪಿಂಚಣಿ, ವಿದ್ಯಾರ್ಥಿ ವೇತನ, ಸಬ್ಸಿಡಿ ಇತರೆ ಆರ್ಥಿಕ ನೆರವನ್ನು ನೇರವಾಗಿ ಐಪಿಪಿಬಿ ಖಾತೆಗೆ ವರ್ಗಾಹಿಸಲು ಅವಕಾಶವಿರಲಿದೆ. ಹೀಗಾಗಿ, ಇದನ್ನು ಮನೆ ಮನೆಗೆ ತಮ್ಮ ಬ್ಯಾಂಕ್’ ಎನ್ನಬಹುದು.

ಐಪಿಪಿಬಿ ವಿಶೇಷತೆ: ಖಾತೆ ತೆರೆಯಲು ಅರ್ಜಿ ಭರ್ತಿ ಮಾಡುವ ಅಗತ್ಯವಿಲ್ಲ. ಠೇವಣಿಗೆ, ಹಣ ವರ್ಗಾವಣೆಗೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕೇವಲ ಆಧಾರ್ ಕಾರ್ಡ್‌ಸಂಖ್ಯೆ, ಮೊಬೈಲ್ ಸಂಖ್ಯೆ ನೀಡಿ ಖಾತೆ ತೆರೆಯಬಹುದು. ಮನೆ ಬಾಗಿಲಲ್ಲೇ ಅಂಚೆ ಸಿಬ್ಬಂದಿ ಮೂಲಕ ಖಾತೆ ತೆರೆಯಬಹುದು, ಹಣ ಪಡೆಯಬಹುದು. ಖಾತೆ ತೆರೆಯಲು ಕನಿಷ್ಠ ಠೇವಣಿ ಅಗತ್ಯವಿಲ್ಲ. ಬ್ಯಾಂಕ್ ವ್ಯವಹಾರಕ್ಕೆ ಪಾಸ್‌ಬುಕ್ ಬೇಕಿಲ್ಲ. ಪ್ರತಿ ವ್ಯವಹಾರಕ್ಕೂ ಎಸ್‌ಎಂಎಸ್ ಸಂದೇಶ ರವಾನೆ. ಖಾತೆ ಸಂಖ್ಯೆ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.

ಕ್ಯೂಆರ್ ಕಾರ್ಡ್ ಎಲ್ಲ ಮಾಹಿತಿ ನೀಡುತ್ತದೆ. ಎಲ್ಲ ಬಿಲ್ ಪಾವತಿಗಳನ್ನೂ ಐಪಿಪಿಬಿ ಖಾತೆಯಿಂದಲೇ ನಿರ್ವಹಿಸಲು ಅವಕಾಶ. ಕಾರ್ಡ್ ಬಳಕೆ ವೇಳೆ ಬೆರಳಚ್ಚು ಇಲ್ಲವೇ ಒಟಿಪಿ ವಿವರ ದಾಖಲೀಕರಣ ಅಗತ್ಯ. ಆಧಾರ್ ಕಾರ್ಡ್ ಅಥವಾ ಒಟಿಪಿ ಇಲ್ಲದಿದ್ದರೆ ಕಾರ್ಡ್ ಬಳಸುವ ಅವಕಾಶವಿಲ್ಲದ ಕಾರಣ ದುರ್ಬಳಕೆ ಸಾಧ್ಯವಿಲ್ಲ.

ಅಕೌಂಟ್ ಕಾರ್ಡ್ ಮಾತ್ರ: ಐಪಿಪಿಬಿ ಖಾತೆದಾರರಿಗೆ ನೀಡುವ ಕ್ಯೂಆರ್ ಕಾರ್ಡ್ ಅಕೌಂಟ್ ಕಾರ್ಡ್ ಆಗಿ ಮಾತ್ರ ಬಳಕೆಯಾಗುತ್ತದೆ. ಎಟಿಎಂ/ ಡೆಬಿಟ್ ಕಾರ್ಡ್‌ನಂತೆ ಬಳಸಲು ಅವಕಾಶವಿಲ್ಲ. ಸ್ವೈಪ್‌ಗೆ ಅವಕಾಶವಿಲ್ಲದಿದ್ದರೂ ಹಣ ವರ್ಗಾವಣೆಗೆ ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News