×
Ad

ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯೆ ಪ್ರವೇಶಿಸಲಿ: ವೈ.ಜೆ.ರಾಜೇಂದ್ರ

Update: 2018-09-01 19:57 IST

ಬೆಂಗಳೂರು, ಸೆ.1: ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರ ಮನೆ ಮೇಲೆ ದಾಳಿ ಮಾಡಿ ಬಂಧಿಸುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿದ್ದು, ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯೆ ಪ್ರವೇಶಿಸಿ, ದೇಶದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಪಿಯುಸಿಎಲ್ ರಾಜ್ಯಾಧ್ಯಕ್ಷ ವೈ.ಜೆ.ರಾಜೇಂದ್ರ ಆಗ್ರಹಿಸಿದರು.

ಮಾವನ ಹಕ್ಕುಗಳ ಹೋರಾಟಗಾರರ ಬಂಧನ ವಿರೋಧಿಸಿ ಪಿಯುಸಿಎಲ್ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ದಲಿತ ಹಾಗೂ ಬುಡಕಟ್ಟು ಸಮುದಾಯದ ಏಳ್ಗೆಗಾಗಿ ಶ್ರಮಿಸುತ್ತಿರುವ ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ನಡೆಯುತ್ತಿರುವ ನಿರಂತರವಾದ ದಾಳಿಯನ್ನು ಪಿಯುಸಿಎಲ್ ಖಂಡಿಸುತ್ತದೆ. ದೇಶದಾದ್ಯಂತ ಒಂದು ದಿನ ನಡೆದಿರುವ ಬಂಧನದ ಕಾರ್ಯಾಚರಣೆಯನ್ನು ಪರಿಶೀಲಿಸಿದರೆ ಅಘೋಷಿತ ತುರ್ತು ಪರಿಸ್ಥಿತಿ ಎನ್ನುವಂತಿದೆ. ನಮ್ಮನ್ನಾಳುವ ಪ್ರಭುತ್ವವೆ ತನ್ನ ಪ್ರಜೆಗಳನ್ನು ಬೆದರಿಸಲು, ಹಲ್ಲೆ ಮಾಡಲು ಮುಂದಾಗಿರುವುದು ಶೋಚನೀಯವೆಂದು ಅವರು ಆತಂಕ ವ್ಯಕ್ತಪಡಿಸಿದರು.

ನಮ್ಮ ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಮೂಲಭೂತ ಹಕ್ಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಮ್ಮ ಮೇಲೆ ಕೇಂದ್ರದ ಬಿಜೆಪಿ ಸರಕಾರ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಲು ಮುಂದಾಗಿದೆ. ಹೀಗಾಗಿ ದೇಶದ ಪ್ರಜ್ಞಾವಂತ ವಕೀಲರು, ಜನಪ್ರತಿನಿಧಿಗಳು ಇದರ ವಿರುದ್ಧ ಜನಾಂದೋಲನ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಭಾರತದ ಒಕ್ಕೂಟ ವ್ಯವಸ್ಥೆಯಾಗಿದ್ದು, ಇಲ್ಲಿ ನೂರಾರು ಭಾಷೆ, ವಿಭಿನ್ನ ಸಂಸ್ಕೃತಿ, ಹಲವು ಜಾತಿ, ಧರ್ಮಗಳಿಂದ ಕೂಡಿರುವ ಸೌಹಾರ್ದತೆಯ ದೇಶವಾಗಿದೆ. ಇಂತಹ ಬಹುಸಂಸ್ಕೃತಿಯನ್ನು ನಿರ್ಮೂಲನೆ ಮಾಡುವ ದುರುದ್ದೇಶದ ಭಾಗವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮಾನವ ಹಕ್ಕುಗಳ ಹೋರಾಟಗಾರರ ಮನೆಗಳ ಮೇಲೆ ದಾಳಿ ನಡೆಸಿದೆ ಎಂದು ಅವರು ಖಂಡಿಸಿದರು.

ಹಕ್ಕೊತ್ತಾಯಗಳು

-ಬಂಧನಕ್ಕೆ ಒಳಗಾಗಿರುವ ಮಾನವ ಹಕ್ಕುಗಳ ಹೋರಾಟಗಾರರಾದ ವೆರ್ನನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ, ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್, ವರವರ ರಾವ್ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಬೇಕು.

-ಮಾನವ ಹಕ್ಕು ಹೋರಾಟಗಾರರ ಮೇಲೆ ಹೊರಿಸಿರುವ ಎಲ್ಲ ಸುಳ್ಳು ಆಪಾದನೆಗಳನ್ನು ಹಿಂದಕ್ಕೆ ಪಡೆಯಬೇಕು.

-ಮಾನವ ಹಕ್ಕುಗಳ ಹೋರಾಟಗಾರರ ಮನೆಯ ಮೇಲೆ ದಾಳಿಗೆ ಸಂಬಂಧಿಸಿದಂತೆ ಪಾರದರ್ಶಕ, ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕು.

-ಮಾನವ ಹಕ್ಕು ಹೋರಾಟಗಾರರನ್ನು ’ಅರ್ಬನ್ ನಕ್ಸಲ್’ ಎಂಬ ಹಣೆಪಟ್ಟಿ ಹಚ್ಚಿ ಅಪರಾಧಿಯನ್ನಾಗಿಸುತ್ತಿರುವ ಕ್ರಮವನ್ನು ಖಂಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News