ವಿದ್ಯಾರ್ಥಿ-ಸಮಾಜದ ನಡುವೆ ಉನ್ನತ ಶಿಕ್ಷಣ ಕಂದಕ ಸೃಷ್ಟಿಸುತ್ತಿದೆ: ಕೆ.ವೈ ನಾರಾಯಣಸ್ವಾಮಿ

Update: 2018-09-01 15:16 GMT

ಬೆಂಗಳೂರು, ಸೆ.1: ಉನ್ನತ ಶಿಕ್ಷಣ ವ್ಯವಸ್ಥೆಯ ಪಠ್ಯಕ್ರಮವು ವಿದ್ಯಾರ್ಥಿಗಳು ಹಾಗೂ ವಾಸ್ತವ ಜಗತ್ತಿನ ಬದುಕಿನೊಂದಿಗೆ ಕಂದಕವನ್ನು ಉಂಟು ಮಾಡುತ್ತಿದೆ ಎಂದು ಹಿರಿಯ ನಾಟಕಕಾರ ಕೆ.ವೈ,ನಾರಾಯಣಸ್ವಾಮಿ ವಿಷಾದಿಸಿದರು.

ಬದುಕು ಕಮ್ಯೂನಿಟಿ ಕಾಲೇಜು ವತಿಯಿಂದ ನಗರದ ಎಸ್ಸಿಎಂಐನಲ್ಲಿ ಆಯೋಜಿಸಿದ್ದ ಸುಗ್ಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸೂಕ್ತವಾಗಿ ಚಿಂತಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದ ವಯಸ್ಸಿನ ವಿದ್ಯಾರ್ಥಿಗಳನ್ನು ಕೇವಲ ಪಠ್ಯದಲ್ಲಿ ಬಂಧಿಸಿ, ಕೂಪ ಮಂಡೂಕಗಳನ್ನಾಗಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದಿಗೂ ದೇಶದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಶಿಕ್ಷಣ ವ್ಯವಸ್ಥೆ ಜಾರಿಯಾಗಿಲ್ಲ. ಕೇವಲ ಪಠ್ಯಗಳನ್ನು ಬಾಯಿ ಪಾಠ ಮಾಡುವುದು, ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವುದಕಷ್ಟೆ ಸೀಮಿತಗೊಳಿಸಲಾಗಿದೆ. ಇದನ್ನು ಬದಲಾಯಿಸುವಂತಹ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯ ಕುರಿತು ಗಂಭೀರವಾದ ಚರ್ಚೆಗಳಾಗಬೇಕಿದೆ ಎಂದು ಅವರು ಅಭಿಪ್ರಾಯಿಸಿದರು.

ವಿದ್ಯಾರ್ಥಿಗಳನ್ನು ಪಠ್ಯಕ್ರಮಗಳಿಗಷ್ಟೆ ಸೀಮಿತಗೊಳಿಸಬೇಕೆಂದು ಯುಜಿಸಿಯಿಂದ ಸೂಚನೆಗಳು ಕಾಲೇಜುಗಳಿಗೆ ಬರುತ್ತಿದೆ. ದೇಶದ ರಾಜಕೀಯ ವ್ಯವಸ್ಥೆ ಶಿಕ್ಷಣದ ಮೇಲೆ ಸವಾರಿ ಮಾಡುತ್ತಿದ್ದು, ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಎತ್ತದಂತೆ, ವಿಧೇಯರಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇಂತಹ ವಾತಾವರಣದಲ್ಲಿ ಬೆಳೆಯುವ ವಿದ್ಯಾರ್ಥಿ, ಉನ್ನತ ಶಿಕ್ಷಣದಿಂದ ವ್ಯರ್ಥ ವಿದ್ಯಾರ್ಥಿಯಾಗಿ ಹೊರಕ್ಕೆ ಬರುತ್ತಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಸುಂಧರಾ ಭೂಪತಿ, ಸಂವಾದದ ನಿರ್ದೇಶಕಿ ಅನಿತಾ ರತ್ನಂ, ಸಂವಾದದ ಪ್ರಾಂಶುಪಾಲ ಮುರಳಿ ಮೋಹನ್ ಕಾಟಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News