ಸೆ.24 ರಿಂದ ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆ: ಡಾ.ಜಿ.ಪರಮೇಶ್ವರ್

Update: 2018-09-01 15:18 GMT

ಬೆಂಗಳೂರು, ಸೆ.1: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆಯ ಲಾಟರಿ ಪ್ರಕ್ರಿಯೆಯನ್ನು ಸೆ.24ರಂದು ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. 

ಶನಿವಾರ ಬಿಬಿಎಂಪಿ ವತಿಯಿಂದ ಆಯೋಜಿಸಲಾಗಿದ್ದ ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 5 ಸಾವಿರ ನಿವೇಶನಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಬಿಬಿಎಂಪಿಯಲ್ಲಿನ ಪೌರ ಕಾರ್ಮಿಕರಿಗೆ ಪ್ರತ್ಯೇಕ ಆಸ್ಪತ್ರೆ ತೆರೆಯಲು ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜತೆಗೆ, ಪೌರ ಕಾರ್ಮಿಕರಿಗೆ ಸಹಕಾರಿಯಾಗಲು ಸ್ವೀಪಿಂಗ್ ಮಷಿನ್‌ಗಳನ್ನು ಹೆಚ್ಚಿಸಿ, ಈಗಿರುವ ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗುವುದು ಎಂದು ತಿಳಿಸಿದರು. ನಗರದ ಬೀದಿ ದೀಪಗಳಿಗೆ ಎಲ್‌ಇಡಿ ಬಲ್ಬ್ ಬಳಕೆಗೂ ಈಗಾಗಲೇ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು. ಈ ಬಲ್ಬ್‌ಗಳು ಹೆಚ್ಚು ಕಾಲ ಬಾಳಿಕೆ ಬರುವುದರಿಂದ ಬೀದಿದೀಪದ ಸಮಸ್ಯೆ ನೀಗಲಿದೆ ಎಂದು ಹೇಳಿದರು.

ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಎರಡನೇ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ ಮೂವತ್ತು ಲಕ್ಷಕ್ಕೂ ಹೆಚ್ಚು ಜನರು ಸಂಚರಿಸಲು ಅನುಕೂಲವಾಗಲಿದೆ. ಮೆಟ್ರೋ ಕಾಮಗಾರಿ ಪೂರ್ಣಗೊಂಡ ಬಳಿಕ ಬಿಬಿಎಂಪಿ ವತಿಯಿಂದ ಸಂಪರ್ಕ ಸಾರಿಗೆಗಾಗಿ ಟ್ಯಾಕ್ಸಿಗಳನ್ನು ಬಿಡಲು ಚಿಂತಿಸಲಾಗಿದೆ ಎಂದರು. ನಗರ ಬೆಳೆಯುತ್ತಿದ್ದಂತೆ ವಾಯುಮಾಲಿನ್ಯ ಕೂಡ ಹೆಚ್ಚುತ್ತಿದೆ. ಹೀಗಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ. ಇನ್ನು ಐದು ವರ್ಷದಲ್ಲಿ ಡೀಸೆಲ್, ಪೆಟ್ರೋಲ್ ಬಸ್‌ಗಳ ಬದಲು ಎಲೆಕ್ಟ್ರಿಕ್ ಬಸ್‌ಗಳೇ ಹೆಚ್ಚಾಗಲಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 500ಕ್ಕೂ ಹೆಚ್ಚು ಮಂದಿಗೆ ಕೆಂಪೇಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಮೇಯರ್ ಸಂಪತ್‌ರಾಜ್, ವಿಧಾನಪರಿಷತ್ ಸದಸ್ಯ ಶರವಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News