ಪಾಕಿಸ್ತಾನಕ್ಕೆ 300 ದಶಲಕ್ಷ ಡಾಲರ್ ಅಮೆರಿಕ ನೆರವು ರದ್ದು

Update: 2018-09-02 04:52 GMT

ವಾಷಿಂಗ್ಟನ್, ಸೆ. 2: ಪಾಕಿಸ್ತಾನ ಉಗ್ರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ನೀಡಲು ಉದ್ದೇಶಿಸಿದ್ದ 300 ದಶಲಕ್ಷ ಡಾಲರ್ ನೆರವನ್ನು ರದ್ದುಪಡಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸೇನೆ ಪ್ರಕಟಿಸಿದೆ.

ಇದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಡಲು ಕಾರಣವಾಗಿದೆ.

ಮೈತ್ರಿ ನೆರವು ನಿಧಿಯಿಂದ ನೀಡಲು ಉದ್ದೇಶಿಸಿದ್ದ ಈ ನಿಧಿಯನ್ನು ತಡೆಹಿಡಿಯುವ ಉದ್ದೇಶವನ್ನು ಈ ವರ್ಷಾರಂಭದಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದರು. ಈ ಹಿಂದೆ ನೀಡಿದ ನೆರವಿಗೆ ಪಾಕಿಸ್ತಾನ ನೀಡಿದ ಪ್ರತಿಫಲ "ಸುಳ್ಳು ಹಾಗೂ ವಂಚನೆ" ಎಂದು ಟ್ರಂಪ್ ಕಿಡಿ ಕಾರಿದ್ದರು.

ನೆರೆ ದೇಶವಾದ ಅಫ್ಘಾನಿಸ್ತಾನದ ಜತೆಗೆ 17 ವರ್ಷಗಳಿಂದ ಯುದ್ಧ ಮಾಡುತ್ತಿರುವ ಉಗ್ರರಿಗೆ ಪಾಕಿಸ್ತಾನ ಸ್ವರ್ಗ ಎನಿಸಿದೆ ಎನ್ನುವುದು ಅಮೆರಿಕದ ಆರೋಪ. ಆದರೆ ಪಾಕಿಸ್ತಾನ ಇದನ್ನು ನಿರಾಕರಿಸಿದೆ. ಪಾಕಿಸ್ತಾನ ತನ್ನ ನಡತೆಯನ್ನು ತಿದ್ದಿಕೊಂಡರೆ ಈ ನೆರವು ಮರಳಿ ಪಡೆಯಲು ಅವಕಾಶವಿದೆ ಎಂದು ಈ ಮೊದಲು ಅಮೆರಿಕ ಸ್ಪಷ್ಟಪಡಿಸಿತ್ತು. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮಾಟ್ಟಿಸ್ ಅವರಿಗೆ ಈ ನೆರವಿನ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿತ್ತು.

"ದಕ್ಷಿಣ ಏಷ್ಯಾದ ಕಾರ್ಯತಂತ್ರಕ್ಕೆ ಪೂರಕವಾಗಿ ಉಗ್ರರಿಗೆ ನೀಡುವ ನೆರವು ನಿಲ್ಲಿಸಲು ಪಾಕಿಸ್ತಾನ ವಿಫಲವಾಗಿದ ಹಿನ್ನೆಲೆಯಲ್ಲಿ ಉಳಿಕೆ 300 ದಶಲಕ್ಷ ಡಾಲರ್ ನೆರವನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ" ಎಂದು ಪೆಂಟಗಾನ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಕೋನ್ ಫೌಕ್ನರ್ ಪ್ರಕಟಿಸಿದ್ದಾರೆ. ಕಾಂಗ್ರೆಸ್ ಅನುಮೋದಿಸಿದರೆ ಈ ನಿಧಿಯನ್ನು ಬೇರೆ ಪ್ರಮುಖ ಆದ್ಯತೆಯ ಉದ್ದೇಶಗಳಿಗೆ ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News