ರಫೇಲ್ ದೇಶದ ಅತೀ ದೊಡ್ಡ ಹಗರಣ: ಕೆ.ಸಿ.ವೇಣುಗೋಪಾಲ್

Update: 2018-09-02 13:17 GMT

ಬೆಂಗಳೂರು, ಸೆ.2: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೈಲ ಬೆಲೆ ಹೆಚ್ಚಿಸಿ ಸುಲಿಗೆ ಮಾಡುತ್ತಿರುವುದನ್ನು ಖಂಡಿಸಿ, ಜೊತೆಗೆ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ರಾಜ್ಯದೆಲ್ಲೆಡೆ ಬಹುದೊಡ್ಡ ಆಂದೋಲನ ನಡೆಸಲಾಗುವುದು ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ರವಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ತೈಲದ ಹೆಸರಿನಲ್ಲಿ ಜನರ ಬಳಿಯ ಹಣವನ್ನು ಹಗಲಿನಲ್ಲಿಯೇ ಸುಲಿಗೆ ಮಾಡುತ್ತಿದೆ. ದಿನೇ ದಿನೇ ಇಂಧನ ಬೆಲೆ ಹೆಚ್ಚಿಸುವುದರ ಹಿಂದೆ ಬಹುದೊಡ್ಡ ಸಂಚಿದೆ. ಅದೇ ರೀತಿ, ಇನ್ನಿತರೆ ಮೂಲಗಳಿಂದಲೂ ಭ್ರಷ್ಟಾಚಾರ ನಡೆಯುತ್ತಿದ್ದು, ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸಮಾವೇಶ ನಡೆಸಲಾಗುವುದು ಎಂದರು.

ರಫೇಲ್ ವಿಮಾನ ಖರೀದಿಯು ಭಾರತದ ಅತೀ ದೊಡ್ಡ ಭ್ರಷ್ಟಾಚಾರ ಪ್ರಕರಣವಾಗಿದೆ. ಈ ಬಗ್ಗೆ ಎಐಸಿಸಿ ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಕೇಳಿದ್ದರೂ, ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಉತ್ತರಿಸಿಲ್ಲ.ಬದಲಾಗಿ, ಬೋಫೋರ್ಸ್ ವಿಚಾರದಲ್ಲಿ ಸುಳ್ಳು ಆರೋಪ ಮಾಡಿದ್ದಾರೆ. ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದ ಬಗ್ಗೆ ನಾವು ಮೂರು ಸ್ಪಷ್ಟೀಕರಣ ಕೇಳಿದ್ದೇವೆ ಎಂದ ಅವರು, ಯುಪಿಎ ಅವಧಿಯಲ್ಲಿ ಮಾಡಿಕೊಂಡ ಒಪ್ಪಂದ ಮುಂದುವರೆಸಿದ್ದರೆ, ದೇಶದ ಯುವಜನತೆಗೆ ಉದ್ಯೋಗ ದೊರೆಯುತ್ತಿತ್ತು. ಆದರೆ, ಹೊಸ ಒಪ್ಪಂದ ಮಾಡಿಕೊಂಡು ರಫೇಲ್ ವಿಮಾನಗಳಿಗೆ ಹೆಚ್ಚು ಬೆಲೆ ನಿಗದಿ ಮಾಡಿದ್ದಾರೆ ಎಂದು ಆರೋಪಿಸಿದರು.

ದೂರು ನೀಡಿಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಯಾವುದೇ ದೂರು ನೀಡಿಲ್ಲ. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಅಲ್ಲದೆ, ಸಮ್ಮಿಶ್ರ ಸರಕಾರ ಐದು ವರ್ಷಗಳ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ವೇಣುಗೋಪಾಲ್ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿ ಮತ್ತಿತರರು ಪಾಲ್ಗೊಂಡಿದ್ದರು.

‘ಜೆಡಿಎಸ್‌ಗೆ ಸ್ಥಾನ- ಎಐಸಿಸಿ ಚರ್ಚೆ’
ರಾಜ್ಯದ ಎಲ್ಲ 28 ಲೋಕಸಭೆ ಕ್ಷೇತ್ರಗಳಲ್ಲೂ ಗೆಲುವು ಪಡೆಯುತ್ತೇವೆ. ಇನ್ನು, ಕಾಂಗ್ರೆಸ್-ಜೆಡಿಎಸ್ ಮಧ್ಯೆ ಸ್ಥಾನಗಳ ಹಂಚಿಕೆ ಕುರಿತು ಎಐಸಿಸಿ ಮಟ್ಟದ ಸಮಿತಿಯಿಂದ ನಿರ್ಧಾರ ಮಾಡಲಿದೆ.
-ಕೆ.ಸಿ.ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ

ಚೀನಾದೊಂದಿಗೆ ನೃತ್ಯ ಮಾಡಿದ್ದ ಮೋದಿ..!
ಕೈಲಾಸ ಮಾನಸ ಸರೋವರ ಯಾತ್ರೆಗಾಗಿ ಚೀನಾ ದೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೋಗುತ್ತಿರುವ ಬಗ್ಗೆ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಕೆ.ಸಿ.ವೇಣುಗೋಪಾಲ್, ಚೀನಾದ ಪ್ರಧಾನಿಯೊಂದಿಗೆ ನರೇಂದ್ರ ಮೋದಿ ನೃತ್ಯ ಮಾಡಿದಾಗ, ಇವರೆಲ್ಲಾ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News