ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಹೋರಾಟ ಮಾಡುವುದು ಲೇಖಕರ ಕರ್ತವ್ಯ: ಗಿರೀಶ್ ಕಾರ್ನಾಡ್

Update: 2018-09-02 13:45 GMT

ಬೆಂಗಳೂರು, ಸೆ.2: ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಹೋರಾಟ ಮಾಡುವುದು ಎಲ್ಲ ಸಾಹಿತಿ ಮತ್ತು ಲೇಖಕರ ಆದ್ಯ ಕರ್ತವ್ಯವೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಇಂದಿಲ್ಲಿ ಕರೆ ನೀಡಿದ್ದಾರೆ.

ರವಿವಾರ ಗ್ರಾಮ ಸೇವಾ ಸಂಘ ನಗರದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಾದ್ಯಂತ ಮಾನವ ಹಕ್ಕು ಹೋರಾಟಗಾರರ ಮೇಲೆ ಹಾಕಿರುವ ಎಫ್‌ಐಆರ್ ಸಂಪೂರ್ಣ ಅಸಂಬದ್ಧವಾಗಿದೆ. ಪ್ರಕರಣದ ಕುರಿತು ಪೊಲೀಸರಿಗೆ ಖಚಿತತೆಯಿಲ್ಲ. ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಬಂಧಿಸಲಾಗಿದೆ ಎಂದು ಆರೋಪಿಸಿದರು.

ಹಿರಿಯ ಕತೆಗಾರ ವಿವೇಕ ಶಾನಬಾಗ್ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಸಹಿಷ್ಣತೆಗೆ ಎದುರಾಗುತ್ತಿರುವ ಅಪಾಯದ ಕುರಿತು ಮಾತನಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ವೈವಿಧ್ಯತೆ ಹಾಗೂ ಸಹಿಷ್ಣುತೆ ಇಲ್ಲದಿದ್ದರೆ ಸಾಹಿತ್ಯ ರೂಪಗೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ದೇಶದಲ್ಲಿ ಉದ್ದೇಶಪೂರ್ವಕವಾಗಿ ಹರಡುತ್ತಿರುವ ಅಸಹಿಷ್ಣುತೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಹಿರಿಯ ಸಂಶೋಧಕ ಡಿ.ಎಸ್.ನಾಗಭೂಷಣ್ ಮಾತನಾಡಿ, ದೇಶದಲ್ಲಿ ಎಡಪಂಥೀಯರು ಹಾಗೂ ಬಲಪಂಥೀಯರಿಬ್ಬರು ಜಾತಿಯ ಗುಂಪುಗಳಾಗಿ ವಿಂಗಡನೆಗೊಂಡಿದ್ದಾರೆ. ಜಾತಿ ಮೂಲವನ್ನಿಟ್ಟುಕೊಂಡು ಯಾವ ಸುಧಾರಣೆಯನ್ನು ತರಲು ಸಾಧ್ಯವಿಲ್ಲ. ಹೀಗಾಗಿ ನಾವು ಗಾಂಧಿ ಮಾರ್ಗದಲ್ಲಿ ಸಾಗುವ ಮೂಲಕ ಮಾತ್ರ ದೇಶದಲ್ಲಿ ಸಹಿಷ್ಣುತೆ ತರಲು ಸಾಧ್ಯವೆಂದು ತಿಳಿಸಿದರು.

ನಮಗೆ ಸ್ವಾತಂತ್ರ ಪೂರ್ವದ ಗಾಂಧಿಯ ಚಿಂತನೆಗಳನ್ನೆ ಯಥಾವತ್ತಾಗಿ ಅಳವಡಿಸಿಕೊಳ್ಳಬೇಕಿಲ್ಲ. ಇವತ್ತಿನ ವಾಸ್ತವ ಜಗತ್ತಿಗೆ ಅನುಗುಣವಾಗಿ ಗಾಂಧಿ ತತ್ವಗಳನ್ನು ಮಾರ್ಪಾಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯವನ್ನು ಗಾಂಧಿ ಮಾರ್ಗದಲ್ಲಿ ಸಾಗಲು ಪ್ರೇರೇಪಿಸಬೇಕಿದೆ ಎಂದು ಅವರು ಆಶಿಸಿದರು.

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಮಾತನಾಡಿ, ದೇಶದಲ್ಲಿ ಮೂಲಭೂತವಾದಿಗಳೊಂದಿಗೆ ಸಂಘರ್ಷ ಚಾರ್ವಾಕ, ಬುದ್ಧ ಹಾಗೂ ಬಸವಣ್ಣ ಕಾಲದಿಂದಲೂ ಸಾಗಿ ಬಂದಿದೆ. ಇದರ ಪ್ರೇರಣೆಯಿಂದಲೆ ಇವತ್ತಿನ ಕೋಮುವಾದಿ ವಿರುದ್ಧದ ಸಂಘರ್ಷದಲ್ಲಿ ನಾವು ತೊಡಗಬೇಕಿದೆ ಎಂದು ತಿಳಿಸಿದರು.

ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಪ್ರಗತಿಪರ ಚಿಂತಕರು, ವಿದ್ಯಾರ್ಥಿಗಳು ಗ್ರಾಮಗಳತ್ತ ತೆರಳಿ, ಜನರಲ್ಲಿ ವೈಚಾರಿಕತೆಯ ಕುರಿತು ಜಾಗೃತಿ ಮೂಡಿಸಬೇಕು. ನಮ್ಮಲ್ಲೇ ಇರುವ ಶ್ರಮಿಕ ಸಂಸ್ಕೃತಿಯ ಬದುಕಾಗಿಸಿಕೊಂಡು, ವೈದಿಕತೆಯನ್ನು ಸರಾಸಗಟಾಗಿ ತಿರಸ್ಕರಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ.ರಾಜೇಂದ್ರ ಜೆನ್ನಿ, ಆಂಗ್ಲ ಲೇಖಕಿ ಗೀಗಾ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ಧಪ್ಪ, ಕಾದಬಂರಿಕಾರ ಬೋಳವಾರು ಮುಹಮ್ಮದ್ ಕುಂಞ, ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು, ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಹೊಸತು ಪತ್ರಿಕೆ ಸಂಪಾದಕ ಡಾ.ಸಿದ್ಧನಗೌಡ ಪಾಟೀಲ್, ಮಮತಾ ಸಾಗರ್, ಡಾ.ವಿನಯಾ ಒಕ್ಕುಂದ, ಡಾ.ಜಿ.ರಾಮಕೃಷ್ಣ, ಸವಿತಾ ನಾಗಭೂಷಣ್, ಕೆ.ವೈ. ನಾರಾಯಣಸ್ವಾಮಿ, ಜಿ.ಎನ್.ನಾಗರಾಜ್, ಬಿ.ಸುರೇಶ್, ಮುದ್ದು ತೀರ್ಥಹಳ್ಳಿ ಹಾಜರಿದ್ದರು.

‘ಮುಂದಿನ ಲೋಕಸಭಾ ಚುನಾವಣೆ ಪ್ರಗತಿಪರ ಹೋರಾಟಗಾರರಿಗೆ ಮಹತ್ವದ ಸವಾಲಾಗಿದ್ದು, ಸಂವಿಧಾನದ ಮೂಲ ಆಶಯಗಳಾದ ಪ್ರಜಾಪ್ರಭುತ್ವ, ಬಹುಸಂಸ್ಕೃತಿ, ಸಮಾನತೆ, ಸಹಿಷ್ಣುತೆ ಉಳಿಯಬೇಕಾದರೆ ಬಿಜೆಪಿಯನ್ನು ಸೋಲಿಸುವುದು ನಮ್ಮ ಮುಂದಿರುವ ಗುರಿ. ಆ ನಿಟ್ಟಿನಲ್ಲಿ ಎಲ್ಲ ಎಡಪಂಥೀಯ ಪಕ್ಷಗಳು, ಸಂಘಟನೆಗಳು ಹಾಗೂ ಚಿಂತಕರು ಒಂದು ವೇದಿಕೆಯಲ್ಲಿ ಕೆಲಸ ಮಾಡಬೇಕಿದೆ.

-ಪ್ರೊ.ಚಂದ್ರಶೇಖರ ಪಾಟೀಲ್, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News