ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ರಕ್ಷಣಾ ಕವಚ: ದಿನೇಶ್‌ ಅಮೀನ್‌ ಮಟ್ಟು

Update: 2018-09-02 13:53 GMT

ಬೆಂಗಳೂರು, ಸೆ.2: ಬಹುಭಾಷೆ, ಬಹುಸಂಸ್ಕೃತಿ ಹೊಂದಿರುವ ಭಾರತದಂತಹ ದೇಶದಲ್ಲಿ ಭಿನ್ನಾಪ್ರಾಯ ಹೊಂದಿರುವುದು ಪ್ರಜಾಪ್ರಭುತ್ವದ ರಕ್ಷಣಾ ಕವಚವಿದ್ದಂತೆ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮೀನ್ ಮಟ್ಟು ಅಭಿಪ್ರಾಯಿಸಿದರು.

ರವಿವಾರ ಗ್ರಾಮ ಸೇವಾ ಸಂಘ ನಗರದ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಭಾರತ ಭಿನ್ನಾಭಿಪ್ರಾಯಗಳ ನಡುವೆ ಬಹುತ್ವಗಳನ್ನು ಉಳಿಸಿಕೊಂಡು ಬಂದಿದೆ. ಆದರೆ, ಬಿಜೆಪಿ ತನ್ನ ಸರ್ವಾಧಿಕಾರಿ ಧೋರಣೆಯಿಂದಾಗಿ ದೇಶದ ಬಹುಸಂಸ್ಕೃತಿಯನ್ನು ನಿರ್ಮೂಲನೆ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಸಮಾಜದಲ್ಲಿ ಕೇವಲ ಸಹಿಷ್ಣುತೆ ಇದ್ದರೆ ಸಾಲದು, ಅದನ್ನು ಮೀರಿ ಎಲ್ಲ ಜಾತಿ, ಧರ್ಮಗಳನ್ನು ಪಾಲಿಸುವ ಜನತೆಯನ್ನು ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ. ಇಂತಹ ವಾತಾವರಣ ನಿರ್ಮಾಣಕ್ಕೆ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಎಂದು ಅವರು ಹೇಳಿದರು.

ಬಿಜೆಪಿಯ ಕೋಮುವಾದಿ ಸರ್ವಾಧಿಕಾರಿ ಧೋರಣೆಯು ಕೇವಲ ಸಾಹಿತಿಗಳಿಗೆ ಮಾತ್ರ ಆತಂಕಕ್ಕೆ ಕಾರಣವಾಗಿಲ್ಲ. ಇಲ್ಲಿನ ರೈತರು, ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಬದುಕು ಕೂಡ ಆತಂಕದಿಂದ ಕೂಡಿದೆ. ಹೀಗಾಗಿ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಜನಾಂಧೋಲನ ರೂಪಿಸಬೇಕಾಗಿದೆ ಎಂದು ಅವರು ಹೇಳಿದರು.

ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಭಾರತದಲ್ಲಿರುವ ಅಸಹಿಷ್ಣತೆ ಇಲ್ಲಿನ ಸಂಸ್ಕೃತಿಯ ಭಾಗವಾಗಿದೆ. ದಲಿತನೊಬ್ಬ ಹೊಸ ಬಟ್ಟೆ ಧರಿಸಿದರೆ, ಶೂ ಹಾಕಿದರೆ, ಸ್ವಾಭಿಮಾನದಿಂದ ಬದುಕಿದರೆ, ಅವರನ್ನು ಸುಟ್ಟು ಹಾಕಲಾಗುತ್ತಿದೆ. ಹಾಗೆಯೆ ದಲಿತರು ಮೀಸಲಾತಿ ಪಡೆಯುವುದೆ ದೊಡ್ಡ ಅಪರಾಧವಾಗಿರುವ ದೇಶದಲ್ಲಿ ಸಹಿಷ್ಣುತೆಯನ್ನು ತರಲು ದೊಡ್ಡ ಸವಾಲಿನ ಸಂಗತಿ ಎಂದು ತಿಳಿಸಿದರು.

ನಮ್ಮ ಶಿಕ್ಷಣ ವ್ಯವಸ್ಥೆಯು ಮಕ್ಕಳಿಗೆ ಪರಸ್ಪರ ಗೌರವಿಸುವುದನ್ನು, ಜಾತಿ, ಧರ್ಮಗಳಿಗಿಂತ ಮನುಷ್ಯನೆ ಶ್ರೇಷ್ಟವೆಂದು ಹೇಳಿಕೊಡುವುದಿಲ್ಲ. ಚಿಕ್ಕಂದಿನಲ್ಲಿಯೆ ಜಾತಿ ತಾರತಮ್ಯಗಳನ್ನು ನೋಡುವ ಮಗು, ಅದೇ ನಿಜವಾದ ಜೀವನ ಪದ್ಧತಿಯೆಂದು ಗ್ರಹಿಸುವುದರಲ್ಲಿ ಅಚ್ಚರಿಯಿಲ್ಲ. ಇಂತಹ ಮನೋಧರ್ಮ ಹೋಗಲಾಡಿಸಿ, ನಾವೆಲ್ಲರು ಭಾರತೀಯರು ಎಂಬ ಭಾವನೆ ಮೂಡಿಸುವ ಶಿಕ್ಷಣ ಪದ್ಧತಿ ನಮ್ಮಲ್ಲಿಲ್ಲವೆಂದು ಅವರು ವಿಷಾದಿಸಿದರು.

ಗಾಂಧಿ ಹಾಗೂ ಅಂಬೇಡ್ಕರ್ ಸಿದ್ಧಾಂತಗಳನ್ನು ವಿರೋಧಿಸುವ ಸರಕಾರ ನಮ್ಮನ್ನಾಳುತ್ತಿದೆ. ಹೀಗಾಗಿ ದೇಶದಲ್ಲಿ ಅಸಹಿಷ್ಣುತೆ ಇರುವುದು ಸಹಜವಾಗಿದೆ. ಹೀಗಾಗಿ ಗಾಂಧಿ, ಅಂಬೇಡ್ಕರ್ ಎರಡು ಸಿದ್ಧಾಂತಗಳನ್ನು ಒಗ್ಗೂಡಿಸಿ, ಹೊಸ ಸಮಾಜದ ನಿರ್ಮಾಣಕ್ಕೆ ಹಾಗೂ ರಾಜಕೀಯ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕಬೇಕಿದೆ ಎಂದು ಅವರು ಆಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News