ಪುಟ್ಗೋಸಿ ವೋಟ್ ಯಾರಿಗೆ ಬೇಕು: ಅನಂತ್‌ ಕುಮಾರ್ ಹೆಗಡೆ

Update: 2018-09-02 14:50 GMT

ಬೆಂಗಳೂರು, ಸೆ. 2: ಓಲೈಕೆ ಮಾಡಿಕೊಂಡು ಚುನಾವಣೆಯಲ್ಲಿ ಪಡೆಯುವ ‘ಪುಟ್ಗೋಸಿ ವೋಟ್’ ಯಾರಿಗೆ ಬೇಕು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್‌ ಕುಮಾರ್ ಹೆಗಡೆ ವಿವಾದಿತ ಹೇಳಿಕೆ ನೀಡಿದ್ದಾರೆ.

ರವಿವಾರ ನಗರದ ಡಿವಿಜಿ ರಸ್ತೆಯ ಅಬಲಾಶ್ರಮದಲ್ಲಿ ಜಾಗೃತ ಭಾರತಿ ಪ್ರಕಾಶನ ವತಿಯಿಂದ ಆಯೋಜಿಸಿದ್ದ, ‘ವಿಭಜಿತ ಭಾರತ-1947’ ಎಂಬ ವಿಷಯದ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಅಪ್ಪ-ಅಮ್ಮನ ಪರಿಚಯ ಇಲ್ಲದವರ, ಕುಲ ಒಂದು ಬೆಳೆಯುತ್ತಿದೆ. ಇವರೆಲ್ಲರೂ ಜಾತ್ಯತೀತರು. ಅಷ್ಟೇ ಅಲ್ಲದೆ, ಹೀಗೆ ಮಾತನಾಡಿದರೆ, ಮತ ಬೀಳುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ, ನನಗೆ ಚಟಕ್ಕಾಗಿ ಮಾಡುವ ರಾಜಕೀಯ ಬೇಕಿಲ್ಲ. ಇನ್ನು, ಈ ಪುಟ್ಗೋಸಿ ವೋಟ್ ಯಾರಿಗೆ ಬೇಕು ಎಂದು ಮತದಾರರನ್ನೆ ನಿಂದಿಸಿದರು.

ಯಾರದೋ ತೀಟೆಗೆ, ಯಾರಿಗೋ ನಿದ್ದೆ ಬಂದಿಲ್ಲ ಎಂದು ದೇಶ ವಿಭಜನೆ ಮಾಡಿದ್ದಾರೆ. ರಾಜಕೀಯವಾಗಿ ವಿಭಜನೆ ಒಪ್ಪಿದರೂ, ಸಾಂಸ್ಕೃತಿಕವಾಗಿ ಒಪ್ಪಲು ಸಾಧ್ಯವಿಲ್ಲ. ಮುಂದೊಂದು ದಿನ ಒಡೆದು ಹೋದ ಜಾಗ ಮತ್ತೆ ನಮ್ಮ ತೆಕ್ಕೆಗೆ ಸೇರಿಲ್ಲವಾದರೆ ನಾವು ಭಾರತೀಯರೆ ಅಲ್ಲ. ಅದು ಅಲ್ಲದೆ, ಆವತ್ತಿನ ನಾಯಕತ್ವದ ಷಂಡತನದಿಂದ ದೇಶ ವಿಭಜನೆ ಆಯಿತು ಎಂದು ತಮ್ಮದೆ ದಾಟಿಯಲ್ಲಿ ವಿಶ್ಲೇಷಿಸಿದರು.

‘ಕೆಂಪಂಗಿ’ದಾರರಿಗೆ ತನ್ನ ಬಗೆಗೆ ಅರಿವಿಲ್ಲ ಎಂದ ಅವರು, ಕೆಂಪಂಗಿ ಬುದ್ದಿ ಜೀವಿಗಳಿಗೆ ಏನು ಗೊತ್ತಿಲ್ಲ. ಅವರಿಗೆ ಏನೋ ಬರೆಯಬೇಕು, ಹೇಳಬೇಕು. ಹೀಗಾಗಿ ಅವರಿಗೆ ನಾ ಎಲ್ಲಿಂದ ಬಂದಿದ್ದೇನೆ ಎಂದು ಅವರಿಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ಹೋರಾಟಗಾರರ ಒಕ್ಕೂಟವೊಂದು ಹುಟ್ಟಿದ್ದು, ಅವರಿಗೆ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News