ಮಾಧ್ಯಮ, ಬಿಜೆಪಿ-ಕಾರ್ಪೊರೇಟ್ ಕಂಪೆನಿಗಳ ನಡುವೆ ನೇರ ಸಂಬಂಧ: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಿ.ಸಾಯಿನಾಥ್

Update: 2018-09-02 14:51 GMT

ಬೆಂಗಳೂರು, ಸೆ.2: ಮಾಧ್ಯಮ, ಬಿಜೆಪಿ ಹಾಗೂ ಕಾರ್ಪೊರೇಟ್ ಕಂಪೆನಿಗಳ ಮಧ್ಯೆ ನೇರವಾದ ಸಂಬಂಧವಿದೆ. ಹೀಗಾಗಿಯೆ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ಶೇ.90ರಷ್ಟು ಸುದ್ಧಿಗಳು ಬಿಜೆಪಿಗೆ ಸಂಬಂಧಿಸಿದಾಗಿರುತ್ತದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಿ. ಸಾಯಿನಾಥ್ ಆರೋಪಿಸಿದ್ದಾರೆ.

ರವಿವಾರ ಡಾ.ಯು.ಆರ್.ಅನಂತಮೂರ್ತಿ ನೆನಪಿಗಾಗಿ ನಗರದ ಸುಚಿತ್ರ ಆಯೋಜಿಸಿದ್ದ ಮಾಧ್ಯಮ ಮತ್ತು ಗ್ರಾಮೀಣ ಭಾರತ ಕುರಿತು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿ ಕಾರ್ಪೊರೇಟ್ ಕಂಪೆನಿಗಳಿಗೆ ಪೂರಕವಾಗಿ ಕಾನೂನುಗಳನ್ನು ಜಾರಿ ಮಾಡುತ್ತವೆ. ಗಣಿಗಾರಿಕೆ, ಬ್ಯಾಂಕಿಂಗ್ ಹಾಗೂ ಶಿಕ್ಷಣದ ಖಾಸಗೀಕರಣ ಮಾಡುವ ಮೂಲಕ ಕಂಪೆನಿಗಳಿಗೆ ಕೋಟ್ಯಂತರ ರೂ.ಲಾಭ ಮಾಡಿಕೊಟ್ಟಿದೆ. ಇದಕ್ಕೆ ಕೃತಜ್ಞತೆಯಾಗಿ ಇದೇ ಕಂಪೆನಿಗಳ ಒಡೆತನದಲ್ಲಿರುವ ಮಾಧ್ಯಮಗಳು ಬಿಜೆಪಿ ಪರವಾಗಿ ಸುದ್ದಿಗಳನ್ನು ಬಿತ್ತರಿಸುತ್ತವೆ ಎಂದು ಅವರು ಹೇಳಿದರು.

ದೇಶದಲ್ಲಿರುವ ಬಹುತೇಕ ಮಾಧ್ಯಮಗಳು ಬೃಹತ್ ಕಂಪೆನಿಗಳ ಒಡೆತನದಲ್ಲಿವೆ. ಹೀಗಾಗಿ ತಮ್ಮ ಹಿತಾಸಕ್ತಿಗೆ ಪೂರಕವಾದಂತಹ ಸುದ್ದಿಗಳನ್ನೆ ದೇಶದ ಸರ್ವಜನರ ಸುದ್ಧಿ ಎನ್ನುವ ಮಾದರಿಯಲ್ಲಿ ಪ್ರಸಾರ ಮಾಡುತ್ತಿವೆ. ಹೀಗಾಗಿ ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ, ಕೇರಳದಲ್ಲಿ ಪ್ರವಾಹದಿಂದಾಗಿ ನೂರಾರು ಜನ ಸಾವನ್ನಪ್ಪಿ, ಲಕ್ಷಾಂತರ ಮಂದಿ ನಿರಾಶ್ರಿತಗೊಂಡಿರುವುದು ಮಾಧ್ಯಮಗಳಿಗೆ ಮುಖ್ಯ ಸುದ್ದಿಯೆ ಆಗುವುದಿಲ್ಲವೆಂದು ಅವರು ಹೇಳಿದರು.

1920ರ ಸುಮಾರಿನಲ್ಲಿ ದೇಶದಲ್ಲಿ ಪ್ಲೇಗ್ ರೋಗ ಹರಡಿದ ಸಂದರ್ಭದಲ್ಲಿ ಮಾಧ್ಯಮಗಳು, ಜನರಿಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಆದರೆ, ಇಂದು ಮಾಧ್ಯಮಗಳು ಕೇವಲ ಉದ್ಯಮ ಪತಿಗಳ, ಧಾರ್ಮಿಕವಾದಿಗಳ ಹಾಗೂ ತಮ್ಮ ಹಿತಾಸಕ್ತಿಗೆ ಪೂರಕವಾದ ರಾಜಕೀಯ ಪಕ್ಷಗಳ ಸುದ್ದಿಗಳಿಗೆ ಮಾತ್ರ ಸೀಮಿತಗೊಂಡಿವೆ ಎಂದು ಅವರು ವಿಷಾದಿಸಿದರು.

ದೇಶದ ಸ್ವಾತಂತ್ರಕ್ಕಾಗಿ ಹಾಗೂ ಸಮಾಜ ಸುಧಾರಣೆಗಾಗಿ ಹೋರಾಟ ಮಾಡಿದ ರಾಜಾರಾಮ್ ಮೋಹನ್‌ರಾಯ್, ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್‌ ಸಿಂಗ್ ಸೇರಿದಂತೆ ಹಲವು ನಾಯಕರು ಪತ್ರಕರ್ತರಾಗಿದ್ದರು. ಸಮಾಜ ಬದಲಾವಣೆ ಜತೆಗೆ ಪತ್ರಕರ್ತರಾಗಿ ಜನರ ತಿಳುವಳಿಕೆಯನ್ನು ಬೆಳೆಸಿದ್ದರು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಸಮಾಜದ ಬದಲಾವಣೆಯ ಜತೆ-ಜತೆಯಲ್ಲಿ ಸಾಗುವುದೆ ನಿಜವಾದ ಪತ್ರಕರ್ತನ ಲಕ್ಷಣವೆಂದು ಅವರು ಹೇಳಿದರು.

‘1990ರ ಸಾಲಿನಲ್ಲಿ ದೇಶದಲ್ಲಿ ಒಬ್ಬ ಬಿಲಿಯನೇರ್ ಇರಲಿಲ್ಲ. ಆದರೆ, 2000 ಹಾಗೂ 2018ರ ಸಾಲಿನಲ್ಲಿ ನೂರಾರು ಬಿಲಿಯನೇರ್ ಹುಟ್ಟಿದ್ದಾರೆ. ದೇಶದಲ್ಲಿ ಕೋಟ್ಯಾಂತರ ರೈತರು-ಕಾರ್ಮಿಕರು ಹಗಲಿರುಳು ದುಡಿದರೂ ಜೀವನ ನಡೆಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುತ್ತಿರುವ ಸಂದರ್ಭದಲ್ಲಿ ಉದ್ಯಮಪತಿಗಳು ವರ್ಷದಿಂದ ವರ್ಷಕ್ಕೆ ಬಿಲಿಯನೇರ್‌ಗಳಾಗುತ್ತಿರುವುದರ ಹಿಂದಿನ ಮರ್ಮವೇನು’
-ಪಿ.ಸಾಯಿನಾಥ್, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News