ಆರೆಸ್ಸೆಸ್ ಎಂದಿಗೂ ಸಂವಿಧಾನವನ್ನು ಒಪ್ಪುವುದಿಲ್ಲ: ಹಿರಿಯ ವಕೀಲ ಪ್ರಶಾಂತ್ ಭೂಷಣ್

Update: 2018-09-02 15:17 GMT

ಬೆಂಗಳೂರು,ಸೆ.2: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ಸಂವಿಧಾನವನ್ನು ವಿರೋಧಿಸುವ ಸಂಘವಾಗಿದೆ ಎಂದು ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ರವಿವಾರ ನಗರದ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ ದಕ್ಷಿಣಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕ ಹಾಗೂ ಆಡಳಿತದಲ್ಲಿರುವವರು ಸಂವಿಧಾನವನ್ನು ಉಳಿಸುವ ಪ್ರತಿಜ್ಞೆ ಮಾಡಬೇಕು. ಆದರೆ, ಸಂಘಪರಿವಾರ ಈ ಕೆಲಸವನ್ನು ಎಂದಿಗೂ ಮಾಡುವುದಿಲ್ಲ ಎಂದರು.

ಸಂವಿಧಾನವನ್ನು ವಿರೋಧಿಸುವವರ, ದ್ವೇಷದ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ವ್ಯಕ್ತಿಗಳೇ, ದೇಶದ ಪ್ರಧಾನಿಯ ಸಾಮಾಜಿಕ ಜಾಲತಾಣಗಳನ್ನು ಫಾಲೋ ಮಾಡುತ್ತಿರುತ್ತಾರೆ. ಅಲ್ಲದೆ, ಮನೆಗೆ ಕರೆದು ಚಹಾ ಕುಡಿಸಿ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಆರೆಸ್ಸೆಸ್‌ನ ಸಂಘಟಿತ ಆರ್ಮಿಗೆ ಕೇವಲ ಸುಳ್ಳು ಸುದ್ದಿಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದೇ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳು ಸುದ್ದಿಗಳ ಮೂಲಕ ಜನರ ಯೋಚನೆಯನ್ನೂ ದಾರಿ ತಪ್ಪಿಸಲಾಗುತ್ತಿದೆ. ಆದರೆ, ದೇಶದ ರೈತರ ಹೊಟ್ಟೆ ತುಂಬುತ್ತಿಲ್ಲ. ದಲಿತರು, ಆದಿವಾಸಿಗಳನ್ನು ತುಳಿಯಲಾಗುತ್ತಿದೆ. ಇಂತಹವರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದು, ಪರಿಸ್ಥಿತಿ ಅತ್ಯಂತ ದುರ್ಬಲವಾಗಿದೆ. ಸರಕಾರದ ವಿರುದ್ಧ ಬರೆದವರ ಅಥವಾ ಮಾತನಾಡುವವರ ಮೇಲೆ ಹಲ್ಲೆಗಳು ಹಾಗೂ ಹತ್ಯೆಗಳು ನಡೆಯುತ್ತಿದೆ. ಇಂದಿನ ಬಹುತೇಕ ಮಾಧ್ಯಮಗಳನ್ನು ಕೇಂದ್ರ ಸರಕಾರ ನಿಯಂತ್ರಿಸುತ್ತಿದೆ. ಅನುಮತಿ ರದ್ಧು, ಜೀವ ಬೆದರಿಕೆ, ಇನ್ನಿತರೆ ಲಂಚದ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಹಿಂದಿತ್ವವಾದಿಗಳು ದೇಶದಲ್ಲಿಂದು ಹಿಂದೂ ರಾಷ್ಟ್ರ ಕಟ್ಟಲು ಮುಂದಾಗುತ್ತಿದ್ದಾರೆ. ವಿವಿಧತೆಯನ್ನು ಗೌರವಿಸುತ್ತಿಲ್ಲ. ಜೆಎನ್‌ಯುನಲ್ಲಿ ಯೋಚನಾ ಸ್ವಾತಂತ್ರವನ್ನು ದಮನ ಮಾಡಲಾಗುತ್ತಿದೆ. ಇದನ್ನು ಪ್ರಶ್ನೆ ಮಾಡಿದರೆ ಶಿಕ್ಷಣ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ವಿಶ್ವವಿದ್ಯಾಲಯಗಳನ್ನು ತಮಗೆ ಬೇಕಾದ ರೀತಿಯಲ್ಲಿ ನಿರ್ಮಿಸಲು ಮುಂದಾಗಿದ್ದಾರೆ. ಇದರ ವಿರುದ್ಧ ಜಾಗೃತಿ ಮೂಡಿಸುವ ತಂಡಗಳು ಹುಟ್ಟಬೇಕಿದೆ. ವಿವಿಧತೆಯನ್ನು ಗೌರವಿಸುವ ಸಂದೇಶಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕಿದೆ ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News