ಮೀಟರ್ ಬಡ್ಡಿ ದಂಧೆ ಹೆಸರಿನಲ್ಲಿ ಕಿರುಕುಳ ಆರೋಪ: ಇಬ್ಬರ ಸೆರೆ

Update: 2018-09-02 15:23 GMT

ಬೆಂಗಳೂರು, ಸೆ.2: ಮೀಟರ್ ಬಡ್ಡಿ ದಂಧೆ ಹೆಸರಿನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರನ್ನು ಇಲ್ಲಿನ ಮಾಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಹೇಮಾವತಿ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕೆ.ಪಿ. ಅಗ್ರಹಾರದ ಯಶೋಧ ಎಂಬಾಕೆ ಟ್ರಾವೆಲ್ಸ್ ಏಜೆನ್ಸಿ ನಡೆಸಲು ಕಳೆದ ವರ್ಷಗಳ ಹಿಂದೆ ಆರೋಪಿ ಹೇಮಾವತಿಯಿಂದ 2 ಲಕ್ಷ ರೂ.ಸಾಲ ಪಡೆದಿದ್ದರು. ಬಳಿಕ ಹಂತ-ಹಂತವಾಗಿ ಒಟ್ಟು 5 ಲಕ್ಷ ರೂ. ಸಾಲ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಶೇ.20 ರಷ್ಟು ಬಡ್ಡಿ ಕಟ್ಟುತ್ತಿದ್ದರು.

ಅಸಲಿಗಿಂತ ಬಡ್ಡಿ ಪಾವತಿಸಿದರೂ ಆರೋಪಿಗಳು ಚಕ್ರಬಡ್ಡಿ ಸೇರಿದಂತೆ ಇನ್ನೂ 40 ಲಕ್ಷ ರೂ. ಕಟ್ಟಬೇಕು ಎಂದು ಹೇಳಿ ಮನೆ ಪತ್ರವನ್ನು ಬಲವಂತವಾಗಿ ಕಸಿದು ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲದೆ, ಯಶೋಧ ಅವರ ಪುತ್ರಿ ಆರು ತಿಂಗಳು ಗರ್ಭಿಣಿಯಾದರೂ ದಂಧೆಕೋರರು ಮನೆಗೆ ಬೀಗ ಹಾಕಿ ಅಮಾನವೀಯತೆ ಮೆರೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದು, ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನ್ನೂ 6 ಜನರ ಪತ್ತೆಗೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News