ಸಮ್ಮಿಶ್ರ ಸರಕಾರಕ್ಕೆ ಜನತೆಯ ಸಹಮತ: ಎಚ್.ಡಿ.ಕುಮಾರಸ್ವಾಮಿ

Update: 2018-09-03 13:18 GMT

ಬೆಂಗಳೂರು, ಸೆ.3: ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ರಾಜ್ಯದ ಜನತೆ ಸಹಮತ ವ್ಯಕ್ತಪಡಿಸಿರುವುದು ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ನಾವು ದೊಡ್ಡಮಟ್ಟದಲ್ಲಿ ಭರಾಟೆಯ ಪ್ರಚಾರ ಮಾಡಿಕೊಂಡು ಜನತೆಯ ಮುಂದೆ ಹೋಗಿಲ್ಲ. ನಮ್ಮ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದುಕೊಂಡು ಸ್ಥಳೀಯವಾಗಿ ಚುನಾವಣೆ ನಡೆಸಿಕೊಳ್ಳಲಿ ಎಂದು ನಾವು ಎರಡು ಪಕ್ಷಗಳು ತೀರ್ಮಾನ ಮಾಡಿದೆವು ಎಂದರು.

ಬಿಜೆಪಿ ನಾಯಕರಂತೆ ನಾವು ಜಿಲ್ಲಾವಾರು ತಂಡಗಳನ್ನು ಮಾಡಿಕೊಂಡು ಪ್ರಚಾರಕ್ಕೆ ಹೋಗಿರಲಿಲ್ಲ. ನಗರ ಪ್ರದೇಶದ ಮತದಾರರು ಮೊದಲಿನಿಂದಲೂ ಬಿಜೆಪಿ ಪರವಾಗಿ ಹೆಚ್ಚಿನ ಒಲವು ತೋರುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಇಂದಿನ ಚುನಾವಣಾ ಫಲಿತಾಂಶ ನೋಡಿದರೆ ನಗರ ಪ್ರದೇಶಗಳಲ್ಲೂ ಬಿಜೆಪಿ ಪರವಾದ ಒಲವು ಕಡಿಮೆಯಾಗುತ್ತಿರುವುದು ಕಂಡು ಬರುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಮ್ಮಿಶ್ರ ಸರಕಾರದ 100 ದಿನಗಳ ಆಡಳಿತವನ್ನು ಜನ ಬೆಂಬಲಿಸಿದ್ದಾರೆ. ಅದಕ್ಕಾಗಿ ಗೌರವಪೂರ್ವಕವಾಗಿ ಎರಡು ಪಕ್ಷಗಳ ಪರವಾಗಿ ಮತದಾರರಿಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ. ಸರಕಾರದ ಸ್ಥಿರತೆ ಕುರಿತು ಅಪಪ್ರಚಾರ ಮಾಡುತ್ತಿರುವವರಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಜೆಪಿ ನಾಯಕರು ಪದೇ ಪದೇ ರಾಜ್ಯ ಸರಕಾರ ಇದೆಯಾ? ಉತ್ತರ ಕರ್ನಾಟಕಕ್ಕೆ ಯಾಕೆ ಭೇಟಿ ನೀಡಿಲ್ಲ? ಎಂದು ಪ್ರಶ್ನಿಸುತ್ತಿದ್ದರು. ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದ ಮೂರು ತಿಂಗಳಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದಾರೆ. ನನ್ನ ವಿರುದ್ಧ ಮಾಡುತ್ತಿರುವ ಆಪಾದನೆಗಳಿಗೆಲ್ಲ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ಅವರು ಹೇಳಿದರು.

ರಾಜ್ಯದ ಆರ್ಥಿಕ ಪರಿಸ್ಥಿತಿ, ರೈತರ ಸಾಲ ಮನ್ನಾ, ಸರಕಾರದ ಸಾಧನೆಗಳು, ಶ್ವೇತಪತ್ರ ಸೇರಿದಂತೆ ಎಲ್ಲವನ್ನು ಅವರಿಗೆ ಬೇಕಾದರೆ ಕೇಸರಿ ಬಣ್ಣದಲ್ಲೆ ನೀಡುತ್ತೇನೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಸ್ಥಳೀಯ ಸಂಸ್ಥೆಗಳಲ್ಲಿ ಗೊಂದಲಕ್ಕೆ ಅವಕಾಶ ನೀಡುವುದಿಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಮ್ಮ ಸರಕಾರ ಅಧಿಕಾರಕ್ಕೆ ಬಂದು 100 ದಿನ ಆಗಿದೆ. ಇಷ್ಟು ಕಡಿಮೆ ಅವಧಿಯಲ್ಲೆ ಕಾಂಗ್ರೆಸ್-ಜೆಡಿಎಸ್ ಎಲ್ಲ ಕಡೆ ಜಯಭೇರಿ ಭಾರಿಸಬೇಕಿತ್ತು ಎಂದು ಬಿಜೆಪಿಯವರು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ನಾಡಿನ ಜನತೆಯ ಬೆಂಬಲದಿಂದ ಸ್ವೀಪ್(ಎಲ್ಲ ಸ್ಥಾನಗಳಲ್ಲೂ ಜಯಭೇರಿ) ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಬೆಳಗಾವಿ ರಾಜಕಾರಣವೇ ಬೇರೆ

ಬೆಳಗಾವಿ ಜಿಲ್ಲೆಯ ರಾಜಕಾರಣವೇ ಬೇರೆ. ಜಾರಕಿಹೊಳಿ ಸಹೋದರರು ಮೊದಲಿನಿಂದಲೂ ಅಲ್ಲಿ ಪಕ್ಷೇತರರಂತೆ ಗೆದ್ದು ಬರುತ್ತಿದ್ದಾರೆ. ಸರಕಾರದಲ್ಲಿ ರಮೇಶ್ ಜಾರಕಿಹೊಳಿ ಸಚಿವರಾದರೆ, ಸತೀಶ್ ಜಾರಕಿಹೊಳಿ ಶಾಸಕರಾಗಿದ್ದಾರೆ. ಸತೀಶ್ ಜಾರಕಿಹೊಳಿ ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ನಾಯಕರು ಪಟ್ಟಿ ಹಿಡಿದುಕೊಂಡು ಹಗಲು ಕನಸು ಕಾಣುತ್ತಿದ್ದಾರೆ. ಆದರೆ, ಅವರ ಕನಸು ಎಂದಿಗೂ ನನಸಾಗುವುದಿಲ್ಲ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News