ಕೆರೆ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಸಿ.ಎಸ್.ಪುಟ್ಟರಾಜು

Update: 2018-09-03 13:27 GMT

ಬೆಂಗಳೂರು, ಸೆ. 3: ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಲಾಗಿದ್ದು, ಕೆರೆಗಳ ಸಂರಕ್ಷಣೆ ದೃಷ್ಟಿಯಿಂದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲೆ ಆರಂಭಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾನೂನಿನ ಅನ್ವಯ ಯಾವುದೇ ಮುಲಾಜಿಲ್ಲದೆ, ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿನ 36 ಸಾವಿರ ಕೆರೆಗಳ ಪೈಕಿ 30 ಸಾವಿರ ಕೆರೆಗಳು ಜೀವಂತವಾಗಿದ್ದು, ಅವುಗಳ ಸಂರಕ್ಷಣೆಗೆ ‘ಕೆರೆ ಸಂರಕ್ಷಣಾ ಪ್ರಾಧಿಕಾರ’ ರಚನೆ ಮಾಡಿದ್ದು, ಸಿಎಂ ಅಧ್ಯಕ್ಷರಾಗಿದ್ದು, ಸಣ್ಣ ನೀರಾವರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ ಎಂದು ಅವರು ತಿಳಿಸಿದರು.

ಕೆರೆ ಸಂಜೀವಿನಿ: ಕೆರೆಗಳ ಹೂಳೆತ್ತಲು ‘ಕೆರೆ ಸಂಜೀವಿನಿ ಯೋಜನೆ’ಗೆ ಶೀಘ್ರದಲ್ಲೆ ಚಾಲನೆ ನೀಡಲಾಗುವುದು. ಅದರ ಭಾಗವಾಗಿ ನೂರು ಪ್ರಮುಖ ಕೆರೆಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ನಟ ಯಶ್ ಫೌಂಡೇಷನ್ ಆಶ್ರಯದಲ್ಲಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆರೆಗಳ ಹೂಳೆತ್ತಲು 100 ಕೋಟಿ ರೂ.ಮೀಸಲಿಟ್ಟಿದ್ದು, ಹೆಚ್ಚಿನ ಅನುದಾನದ ಅಗತ್ಯವಿದ್ದರೂ ಒದಗಿಸಲಾಗುವುದು ಎಂದ ಅವರು, ಕೆರೆ ಹೂಳೆತ್ತಲು ರಾಜ್ಯ ಸರಕಾರ ಯಂತ್ರೋಪಕರಣಗಳನ್ನು ನೀಡಲಿದ್ದು, ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆರೆ ತುಂಬುವ ಯೋಜನೆ: ಎಲ್ಲ ಜಲಾಶಯಗಳು ತುಂಬಿರುವುದರಿಂದ ಕಾವೇರಿ, ಕೃಷ್ಣ, ತುಂಗಭದ್ರಾ ಸೇರಿದಂತೆ ಎಲ್ಲ ನದಿಗಳ ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ. ಕೆಲವಡೆ ನಾಟಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಡಿಸೆಂಬರ್ ವೇಳೆ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಕೆರೆಯಿಂದ ಕೆರೆಗೆ ಸಂಪರ್ಕ: ನೀರಿನ ಶೇಖರಣೆ ಮತ್ತು ಅಂತರ್ಜಲ ಸಂರಕ್ಷಣೆ ಉದ್ದೇಶಕ್ಕಾಗಿ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಈ ಹಿಂದೆ ಇದ್ದ ಸಂಪರ್ಕ ಒತ್ತುವರಿ ಕಾರಣಕ್ಕೆ ಕಡಿತಗೊಂಡಿದ್ದು, ಅವುಗಳನ್ನು ಮರುಪೂರಣಗೊಳಿಸಲು ಕೆರೆಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದರು.

ಕೋರ್ಟ್ ತೀರ್ಪಿನ ಬಳಿಕ ನಿರ್ಧಾರ: ಬೆಂಗಳೂರಿನ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಕೆರೆ ತುಂಬಿಸುವ ಕೆಸಿ ವ್ಯಾಲಿ ಯೋಜನೆ ರಾಜಕೀಯ ಲಾಭಕ್ಕಾಗಿ ಕೆಲ ನಾಯಕರು ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ಕೋರ್ಟ್ ತೀರ್ಪಿನ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

‘ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಗಣಪತಿ ಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜನೆ ಮಾಡಿ ನೀರನ್ನು ಮಲಿನ ಮಾಡಬಾರದು. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪಿಒಪಿ ಮೂರ್ತಿಗಳನ್ನು ಬಳಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ಪೂಜಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’

-ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News