ದೇಶಕ್ಕೆ ಮೈಲಾರ ಮಹದೇವರ ಕೊಡುಗೆ ಅಪಾರ: ಕೇಂದ್ರ ಸಚಿವ ಮನೋಜ್ ಸಿನ್ಹಾ

Update: 2018-09-03 13:38 GMT

ಬೆಂಗಳೂರು, ಸೆ.3: ಹುತಾತ್ಮ ಮೈಲಾರ ಮಹದೇವರು ಈ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ತ್ಯಾಗ, ಬಲಿದಾನ ಇಂದಿಗೂ ಮಾರ್ಗದರ್ಶನವಾಗಿದೆ ಎಂದು ಕೇಂದ್ರದ ಸಂಪರ್ಕ ಸಂವಹನ ಸಚಿವ ಮನೋಜ್ ಸಿನ್ಹಾ ತಿಳಿಸಿದರು.

ಸೋಮವಾರ ನಗರದ ಗಾಂಧಿ ಭವನದಲ್ಲಿ ಕೇಂದ್ರ ಸಂಪರ್ಕ ಸಂವಹನ ಇಲಾಖೆ, ಗಾಂಧಿ ಸ್ಮಾರಕ ನಿಧಿ ಸಹಯೋಗದೊಂದಿಗೆ ಏರ್ಪಡಿಸಿದ್ದ, ಹುತಾತ್ಮ ಮೈಲಾರ ಮಹದೇವ ಅವರ ಸ್ಮಾರಣಾರ್ಥ, ಅಂಚೆ ಚೀಟಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸಂಸಾರ ತೊರೆದು ಬ್ರಿಟಿಷರ ಗುಂಡೇಟಿಗೆ ಎದೆಯೊಡ್ಡಿ ಅದೆಷ್ಟೊ ಮಂದಿ ಹುತಾತ್ಮರಾಗಿದ್ದಾರೆ. ಆದರೆ, ಗಾಂಧೀಜಿ ಹೊರತು ಪಡಿಸಿದರೆ ಮಹದೇವ ಅವರ ಕುಟುಂಬ ಮಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿತ್ತು ಎಂದು ಸ್ಮರಿಸಿದರು.

ಮಹದೇವ ಅವರು ಗಾಂಧೀಜಿ ನೇತೃತ್ವದ ಉಪ್ಪಿನ ಸತ್ಯಾಗ್ರಹದಲ್ಲಿ ಕನ್ನಡ ನಾಡನ್ನು ಪ್ರತಿನಿಧಿಸಿದ್ದರು. ಅಂಥ ವ್ಯಕ್ತಿಯನ್ನು ಹಾಗೂ ಅವರ ವಿಚಾರಧಾರೆಗಳನ್ನು ನಾವುಗಳು ಎಂದಿಗೂ ಮರೆಯಬಾರದು. ಇನ್ನು ಅನೇಕ ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಮೈಲಾರ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಅವರು ಮಾಡಿದ ಸಾಹಸ, ಪಟ್ಟ ಕಷ್ಟ, ತೋರಿದ ದಾಢಸಿತನ ಅಸಾಧಾರಣ. ‘ಮಾಡು ಇಲ್ಲವೆ ಮಡಿ’ ಎಂಬ ಗಾಂಧೀಜಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ ಎಂದು ಬಣ್ಣಿಸಿದರು.

ಗಾಂಧೀಜಿ 1930ರಲ್ಲಿ ಹೂಡಿದ ಉಪ್ಪಿನ ಸತ್ಯಾಗ್ರಹದ ವೇಳೆಗೆ ದಂಡಿಗೆ ನಡೆದ ದೀರ್ಘ ಕಾಲು ನಡಿಗೆಯ ಯಾತ್ರೆಯಲ್ಲಿ ಪಾಲ್ಗೊಂಡ 78 ಸತ್ಯಾಗ್ರಹಿಗಳಲ್ಲಿ ಮಹದೇವ ಕರ್ನಾಟಕದ ಏಕಮಾತ್ರ ಪ್ರತಿನಿಧಿ. ಆಶ್ರಮದ ದಾಖಲೆಯಲ್ಲಿ ಮೈಲಾರ ಮಾರ್ತಾಂಡ ಎಂದು ಇವರ ಹೆಸರಿದೆ. ಆಗ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಮಹದೇವ ಇತರರ ಜತೆ ಬಂಧಿತರಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಶಿವಕುಮಾರ್ ಸಿ.ಉದಾಸಿ, ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಮೈಲಾರ ಮಹದೇವಅವರ ಪುತ್ರಿ ಕಸ್ತೂರಿ ದೇವಿ ಸಿದ್ದಲಿಂಗಯ್ಯ ಸೇರಿದಂತೆ ಪ್ರಮುಖರಿದ್ದರು.

ಶರೀಫರ ಅಂಚೆ ಚೀಟಿಗೆ ಮನವಿ

ಸಂತ ಶಿಶುನಾಳ ಶರೀಫ್ ಅವರ ನೆನಪಿನಲ್ಲಿ ಅಂಚೆ ಚೀಟಿ ಹೊರ ತರುವ ಉದ್ದೇಶದಿಂದ ಕೇಂದ್ರಕ್ಕೆ ಮನವಿ ನೀಡಲಾಗಿದ್ದು, ಈ ಸಂಬಂಧ ಮನೋಜ್ ಸಿನ್ಹಾ ಸಹಕಾರ ನೀಡಬೇಕು.

-ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News