ಕಾಂಗ್ರೆಸ್ ಪಕ್ಷ ಮುಂದಿದೆ: ಡಾ.ಪರಮೇಶ್ವರ್

Update: 2018-09-03 14:22 GMT

ಬೆಂಗಳೂರು, ಸೆ. 3: ನಗರ ಸ್ಥಳೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದೆ. ಆದರೆ, ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆದುಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಸೋಮವಾರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎನ್ನುತ್ತಿದ್ದರು. ಆದರೆ ಈ ಬಾರಿ ನಾವು ಗೆದ್ದಿದ್ದೇವೆ. ಕೆಲವು ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಹೊಂದಾಣಿಕೆ ಮುಂದುವರಿಯಲಿದೆ ಎಂದರು.

ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ಬಾರಿ ಐದು ಸ್ಥಾನ ಗೆದ್ದಿದ್ದೆವು. ಈ ಬಾರಿಯೂ ಅಷ್ಟೆ ಸ್ಥಾನ ಬಂದಿದೆ. ಬಿಜೆಪಿಗೆ ಅವಕಾಶ ಕೊಟ್ಟಿಲ್ಲ. ಜೆಡಿಎಸ್ ಗೆದ್ದಿರುವುದರಿಂದ ಹೊಂದಾಣಿಕೆಯಲ್ಲಿ ಮುಂದೆ ಹೋಗಲಿದ್ದೇವೆ. ಚುನಾವಣೆಗೂ ಮುನ್ನ ಹೋಂದಾಣಿಕೆ ಮಾಡಿಕೊಂಡಿರಲಿಲ್ಲ ಎಂದರು.

ಬಿಬಿಎಂಪಿ ಮೇಯರ್ ಆಯ್ಕೆ ವಿಚಾರದಲ್ಲಿ ಮಹಾನಗರ ಪಾಲಿಕೆಯ ಎಲ್ಲ ಸದಸ್ಯ, ಬೆಂಗಳೂರು ನಗರದ ಶಾಸಕರು ಹಾಗೂ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ಸದಸ್ಯರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಲಾಗುವುದು ಎಂದು ಅವರು ಹೇಳಿದರು.

‘ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಇದಕ್ಕೆ ಜನತೆ ಪಕ್ಷದ ಮೇಲಿಟ್ಟಿರುವ ವಿಶ್ವಾಸವೇ ಕಾರಣ. ಜನತೆಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದು. ಆ ಜವಾಬ್ದಾರಿಯನ್ನು ನಾವೆಲ್ಲ ಪ್ರಾಮಾಣಿಕವಾಗಿ ನಿರ್ವಹಿಸೋಣ. ಗೆದ್ದ ಅಭ್ಯರ್ಥಿಗಳು, ಮತದಾರರಿಗೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆಗಳು’

-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News