ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಡಿಸಿಎಂ ಪರಮೇಶ್ವರ್ ಪರಿಶೀಲನೆ

Update: 2018-09-03 14:52 GMT

ಬೆಂಗಳೂರು, ಸೆ.3: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಸೋಮವಾರ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್, ಜೀವನ್ ಭೀಮಾನಗರ ಸೇರಿದಂತೆ ವಿವಿಧ ಬಡಾವಣಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಮೇಯೋ ಹಾಲ್‌ನಲ್ಲಿರುವ ಬಿಬಿಎಂಪಿ ಪೂರ್ವ ವಲಯದಿಂದ ಹೊರಟು ಜೀವನ್ ಭೀಮಾ ನಗರಕ್ಕೆ ತೆರಳಿದ ಅವರು, ಮೊದಲಿಗೆ ಕೋರಮಂಗಲ ಹಾಗೂ ಚಲ್ಲಘಟ್ಟ ವ್ಯಾಲಿ ರಾಜಕಾಲುವೆ ವೀಕ್ಷಣೆ ಮಾಡಿದರು. ರಾಜಕಾಲುವೆಯಲ್ಲಿ ತುಂಬಿದ ಹೂಳು ನೋಡಿದ ಅವರು, ಕೂಡಲೇ ತೆಗೆಯಲು ಸೂಚನೆ ನೀಡಿದರು. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದ್ದು, ಈ ಅವಧಿಯೊಳಗೆ ರಾಜಕಾಲುವೆಯಲ್ಲಿನ ಹೂಳು ತೆಗೆಯಬೇಕು ಎಂದರು. ಅಲ್ಲಿಂದ ಬೆಮೆಲ್ ಮುಖ್ಯರಸ್ತೆ, ನ್ಯೂ ತಿಪ್ಪಸಂದ್ರಕ್ಕೆ ತೆರಳಿದ ಪರಮೇಶ್ವರ್, ಅಲ್ಲಿ ನಿರ್ಮಾಣವಾಗುತ್ತಿರುವ ರಾಜಕಾಲುವೆ ವೀಕ್ಷಣೆ ಮಾಡಿ, ನ್ಯೂ ಬೈಯ್ಯಪ್ಪನಹಳ್ಳಿ ಬಳಿಯ ಸುರಂಜನ್ ದಾಸ್ ರಸ್ತೆಯಲ್ಲಿ ಅಂಡರ್‌ಪಾಸ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಬಳಿಕ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್‌ಗೆ ತೆರಳಿದರು. ಇಲ್ಲಿನ ಹಳೇ ಬಿಡಿಎ ಕಾಂಪ್ಲೆಕ್ಸ್ ತೆರವುಗೊಳಿಸಿ ನೂತನವಾಗಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅಲ್ಲಿನ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು. ಚೇಂಜ್ ಇಂದಿರಾನಗರ ಒಕ್ಕೂಟದ ಸದಸ್ಯರು ಬಿಡಿಎ ಕಾಂಪ್ಲೆಕ್ಸ್‌ಗೆ ಪರಮೇಶ್ವರ್ ಅವರ ಆಗಮನಕ್ಕೆ ಕಾದು, ನೂತನ ವಾಣಿಜ್ಯ ಸಂಕೀರ್ಣ ಬೇಡ ಎಂದು ಮನವಿ ಮಾಡಿದರು.

ಮನವಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಬೆಂಗಳೂರನ್ನು ಸುಂದರ ನಗರವನ್ನಾಗಿ ಮಾಡುವುದೇ ನನ್ನ ಉದ್ದೇಶ. ಆದರೆ, ಕಳೆದ 20 ವರ್ಷದಲ್ಲಿ ನಗರ ವೇಗವಾಗಿ ಬೆಳೆದು, ಎಲ್ಲೆಡೆ ವಾಣಿಜ್ಯ ಸಂಕೀರ್ಣಗಳೆ ಹೆಚ್ಚಾಗಿವೆ. ಇಲ್ಲಿನ ನಿವಾಸಿಗಳು ಮೊದಲೇ ವಿರೋಧ ವ್ಯಕ್ತಪಡಿಸಿದ್ದರೆ ಇಷ್ಟೆಲ್ಲ ಸಮಸ್ಯೆ ತಲೆದೋರುತ್ತಿರಲಿಲ್ಲ ಎಂದರು. ಈಗಿರುವ ಬಿಡಿಎ ಕಾಂಪ್ಲೆಕ್ಸ್ ಅನ್ನು ಕೆಡವಿ ನೂತನ ಮಾಲ್ ನಿರ್ಮಿಸಲು ಈಗಾಗಲೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಟೆಂಡರ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಅರ್ಹರಿಗೇ ಟೆಂಡರ್ ನೀಡಿದ್ದೇವೆ. ಆದರೂ ಇಲ್ಲಿನ ನಿವಾಸಿಗಳು ಕಾಂಪ್ಲೆಕ್ಸ್ ನಿರ್ಮಾಣದ ಬಗ್ಗೆ ಚರ್ಚಿಸಲು ಮುಂದಿನವಾರ ಬರುವಂತೆ ಆಹ್ವಾನಿಸಿದರು.

ಇದಾದ ಬಳಿಕ ಮರ್ಫಿಟೌನ್ ಮಾರುಕಟ್ಟೆಗೆ ಭೇಟಿ ನೀಡಿದ ಪರಮೇಶ್ವರ್, ಅಲ್ಲಿನ ವ್ಯಾಪಾರಸ್ಥರ ಸಮಸ್ಯೆ ಆಲಿಸಿದರು. ಹತ್ತಾರು ವರ್ಷಗಳಿಂದ ಇಲ್ಲಿಯೇ ವ್ಯಾಪಾರ ನಡೆಸುತ್ತಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ ಎಂದು ದೂರು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಅವರು, ಕ್ರಮಬದ್ಧವಾಗಿ ಹಕ್ಕುಪತ್ರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಭಾಗದಲ್ಲಿರುವ ಅಂಬೇಡ್ಕರ್ ಮೈದಾನವನ್ನೂ ಅಭಿವೃದ್ಧಿ ಪಡಿಸಲು ಸೂಚಿಸಿದರು.

ನಗರ ವೀಕ್ಷಣೆ ವೇಳೆ ಸಂಸದ ಪಿ.ಸಿ.ಮೋಹನ್, ಮೇಯರ್ ಸಂಪತ್ ರಾಜ್, ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಬಿಬಿಎಂಪಿ ಕೊಡುವ ಕೆಂಪೇಗೌಡ ಪ್ರಶಸ್ತಿಯನ್ನು ಸೂಕ್ತ ಮಾನದಂಡದೊಂದಿಗೆ ನೀಡುವ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕೆಂಪೇಗೌಡ ಪ್ರಶಸ್ತಿ ಗೌರವಯುತವಾದದ್ದು. ಹೀಗಾಗಿ ಮುಂದಿನ ಬಾರಿ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದರು.

ರಾಜಕಾಲುವೆ ಒತ್ತುವರಿ ಸಂಬಂಧ ಈಗಾಗಲೇ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ಆನಂತರ, ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಲಾಗುವುದು. ಕಾಂಗ್ರೆಸ್‌ನಿಂದ ಯಾವ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ಹೋಗುತ್ತಾರೆ ಎಂಬ ನಿರೀಕ್ಷೆ ಹೊಂದಿದ್ದರೆ ಅವರಿಗೆ ನಿರಾಸೆಯಾಗಲಿದೆ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News