ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮೋದಿಯ ಗುಲಾಮ: ಕಾಂಗ್ರೆಸ್ ವಾಗ್ದಾಳಿ

Update: 2018-09-04 03:52 GMT

ಹೈದರಾಬಾದ್, ಸೆ. 4: ಅವಧಿಪೂರ್ವ ಚುನಾವಣೆ ನಡೆಸುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚುನಾವಣಾ ಆಯೋಗದಿಂದ ಬೆಂಬಲ ಸಿಕ್ಕದ ಹಿನ್ನೆಲೆಯಲ್ಲಿ ಈ ಪ್ರಸ್ತಾವ ಕೈಬಿಡಲಾಗಿದೆ ಎಂದು ತೆಲಂಗಾಣದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಸಿಎಂ ಮೇಲೆ ವಾಗ್ದಾಳಿ ನಡೆಸಿದೆ.

ಕೆಸಿಆರ್ ವಿಧಾನಸಭೆಯನ್ನು ವಿಸರ್ಜಿಸಿ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಿಜೋರಾಂ ಚುನಾವಣೆಯ ಜತೆಗೇ ರಾಜ್ಯ ವಿಧಾನಸಭೆಗೂ ಚುನಾವಣೆ ನಡೆಸಲು ಮುಂದಾಗುತ್ತಾರೆ ಎಂಬ ವದಂತಿ ಇತ್ತೀಚಿನ ದಿನಗಳಲ್ಲಿ ಹಬ್ಬಿತ್ತು.

"ರಾವ್ ಮೋದಿಯ ಸೂತ್ರದ ಬೊಂಬೆ ಹಾಗೂ ಗುಲಾಮ. ಮುಖ್ಯಮಂತ್ರಿಯ ರಿಮೋಟ್ ಕಂಟ್ರೋಲ್ ಪ್ರಧಾನಿ ಬಳಿ ಇದೆ. ಅವಧಿಪೂರ್ವ ಚುನಾವಣೆಗೆ ಅವರು ಒಪ್ಪಿಗೆ ನೀಡಿಲ್ಲ" ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಶ್ರವಣ್ ದಸೋಜು ಹೇಳಿದ್ದಾರೆ.

"ಅವಧಿಪೂರ್ವ ಚುನಾವಣೆ ನಡೆಸಲು ಮೋದಿ ಹಾಗೂ ಚುನಾವಣಾ ಆಯೋಗ ಒಪ್ಪಿಗೆ ಕೊಟ್ಟಿಲ್ಲ. ಆದ್ದರಿಂದ ಕೆಸಿಆರ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ವಾಸ್ತವವಾಗಿ ಅವರು ವಿಧಾನಸಭೆ ವಿಸರ್ಜಿಸಲು ಮುಂದಾಗಿದ್ದರು ಹಾಗೂ ಆತ್ಮೀಯರ ಬಳಿ ಅದನ್ನು ಹೇಳಿಕೊಂಡಿದ್ದರು" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News