ನನ್ನ ಅವಿಧೇಯತೆಯನ್ನು ಕ್ಷಮಿಸಿ, ಸಹಿಸಿ ಬೆಳೆಸಿದ ಶಿಕ್ಷಕರಿವರು

Update: 2018-09-05 10:09 GMT

ನನಗೆ ಅಕ್ಷರ ಕಲಿಸಿದ ಶಿಕ್ಷಕರಲ್ಲಿ ಮೊತ್ತ ಮೊದಲಿಗೆ ನನ್ನ ಅಬ್ಬ (ಅಪ್ಪ)ನೇ ಮುಂದಿನ ಸಾಲಲ್ಲಿ ನಿಲ್ಲುತ್ತಾರೆ. ಅಂಗನವಾಡಿಗೆ ಹೋಗುವುದಕ್ಕಿಂತಲೂ ಎಷ್ಟೋ ಮೊದಲು ಕನ್ನಡದಲ್ಲಿ ನನ್ನ ಮಾರುದ್ದದ ಹೆಸರನ್ನು ಬಲಕೈಯ್ಯಲ್ಲಿ ಬರೆಯುವಂತೆ ಬೆತ್ತ ಹಿಡಿದು ದಂಡಿಸಿದರೂ, ಬಲಕೈಯ್ಯಲ್ಲಿ ಬರೆಯಲಾಗದ ನಾನು ಎಡಕೈಯ್ಯಲ್ಲೇ ಬರೆದು ಅವಿಧೇಯನಾಗಿದ್ದೆ. ನಂತರ ಕನ್ನಡ ಅಕ್ಷರ ಕಲಿಸಿದವರು ನಂದಾವರದ ಕೋಟೆ ಮಸೀದಿಯಲ್ಲಿದ್ದ ಅಂಗನವಾಡಿಯ ಲೀಲಾ 'ಚೀಚರ್'!!. ಅವರು ಮಧ್ಯಾಹ್ನ ಮಾಡಿಕೊಡುವ ಉಂಡೆಯ ಪರಿಮಳ ಈಗಲೂ ಬೇಕೆಂದಾಗ ಅಘ್ರಾಣಿಸುತ್ತೇನೆ .

ನಂದಾವರ ಪ್ರಾಥಮಿಕ ಶಾಲೆಯ ಗೀತಾ 'ಚೀಚರ್', “ಒಳ್ಳೆಯ ಕಲಿಯುತ್ತಾನೆ, ಆದರೆ ಭಯಂಕರ ಉಪದ್ರ” ಎನ್ನುತ್ತಾ ಪ್ರೀತಿಸುತ್ತಿದ್ದ ಬಾಯಮ್ಮ 'ಚೀಚರ್', ಹೊಸ ಹೊಸ ಆಟವಾಡಿಸುತ್ತಿದ್ದ ವಿಠಲ ಮೇಷ್ಟ್ರು(PT ಮಾಸ್ಟ್ರು) , ಬೋರ್ಡಲ್ಲಿ ಚೆಂದವಾಗಿ ಚಿತ್ರ ಬರೆದು ಅದರ ಕತೆ ಹೇಳುತ್ತಿದ್ದ ವಾಡಿ ಮೇಸ್ಟ್ರು ,ಪ್ರೀತಿಸುತ್ತಾ ,ಗದರಿಸುತ್ತಾ ಅರಬೀ ಅಕ್ಷರಗಳನ್ನು ಕಲಿಸಿದ ನಂದಾವರ ದಾಸರಗುಡ್ಡೆ ಮದ್ರಸದ ಶಾಫಿ ಉಸ್ತಾದ್ .

ಶಾಲೆಯಲ್ಲಿ ಎರಡನೇ ತರಗತಿ ಪಾಸಾದ ನಂತರ ಅಜ್ಜಿ ಮನೆಯಿಂದ ಬೋಳಿಯಾರಿಗೆ ಬಂದಾಗ, ಕುರ್ನಾಡು ದತ್ತಾತ್ರೇಯ ಅನುದಾನಿತ ಶಾಲೆಯ ಗಣಿತವನ್ನು ಪಾಠ ಮಾಡುತ್ತಿದ್ದ ನೀತಾ 'ಟೀಚ', ವಸಂತಿ 'ಟೀಚ', ಹಿಂದಿ ಅಕ್ಷರ ಕಲಿಸಿದ ಸುಂದರ ಮೇಸ್ಟ್ರು, ಸಮಾಜ ವಿಜ್ಞಾನ ಪಾಠ ಮಾಡಿ ಪೃಥ್ವಿರಾಜ ಚೌಹಾಣನ ಲವ್ ಸ್ಟೋರಿ ಹೇಳಿ ಇತಿಹಾಸದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ ಮುಖ್ಯೋಪಾಧ್ಯಾಯರಾದ ಶಿವರಾಂ ಮೇಷ್ಟ್ರು, ವಿಜ್ಞಾನದ ಪ್ರೇಮ 'ಟೀಚ' , ಇಂಗ್ಲಿಷ್ ಕಲಿಸಿದ ಕರಿಯಪ್ಪ ಮೇಷ್ಟ್ರು, ಶಾಲೆಯ ಅತ್ಯಂತ ಜೋರಿನ ಮತ್ತು ಕ್ಲಾಸಿನಲ್ಲಿ ಇಂಗ್ಲಿಷ್ ಹಾಡು ಹಾಡಿಸುತ್ತಿದ್ದ ಗಿರಿಜಾ 'ಟೀಚ' ಮತ್ತು ಓದುವ ಗೀಳು ಅತಿಯಾಗಿ ಬೆಳೆಯುವಂತೆ ಮಾಡಿದ ಕಿನ್ನಾಜೆಯ ಭಾರತೀ 'ಟೀಚ', ಅದೇ ಸಮಯದಲ್ಲಿ ಬೋಳಿಯಾರಿನ ಮದ್ರಸಾದ ಅಬ್ಬಾಸ್ ಉಸ್ತಾದ್, ಮೂರು ವರ್ಷ ಉಸ್ತಾದರಾಗಿದ್ದ ಉಮರ್ ಮದನಿ, ಅಬ್ದುರ್ರಹ್ಮಾನ್ ಸಖಾಫಿ ಕೆಮ್ಮಾರ ಇವರುಗಳೆಲ್ಲಾ ನನ್ನ ಪ್ರಾಥಮಿಕ ಶಿಕ್ಷಣದ ಮೆಟ್ಟಿಲಾಗಿದ್ದಕ್ಕೆ ಕೃತಜ್ಞತೆಯಿದೆ .

 ಮುಡಿಪು ಸರಕಾರಿ ಹೈಸ್ಕೂಲ್ ನಲ್ಲಿ ನಾರಾಯಣ ಭಟ್ಟರ ಜೋಕ್ಸ್ ಹೇಳುತ್ತಾ ಬುದ್ಧನ ಧ್ಯಾನ ಕಲಿಸುತ್ತಾ ಮನಸ್ಸಿಗೆ ನಾಟುವಂತೆ ಅಂಬೇಡ್ಕರ್ ಬಗ್ಗೆ ಅಚ್ಚೊತ್ತಿದ ತ್ಯಾಗರಾಜ ಮೂರ್ತಿ ಸರ್, ಹಿಂದಿಯ ಪ್ರೇಮಪ್ರಭಾ ಟೀಚರ್, ಅಂಬ್ರಾಯ್ಡರಿ ಕಲಿಸಿದ ವೀಣಾ ಟೀಚರ್, ವಿಜ್ಞಾನದ ಉಷಾ ಟೀಚರ್, ಒಂಬತ್ತನೇ ತರಗತಿಯಲ್ಲಿ ರಸಾಯನ ಶಾಸ್ತ್ರ ಕಲಿಸಿದ ಮೇಷ್ಟ್ರೊಬ್ಬರ ಹೆಸರು ಮರೆತು ಹೋಗಿದೆ… ಅವರು ಅದೇ  ವರ್ಷ ತೀರಿಹೋದರು. ಪದ್ಮಾವತಿ ಟೀಚರ್, ಕನ್ನಡದ ಅಶೋಕ ಸರ್, “ಏನ್ ಮಕ್ಳಾ” ಎಂದು ಪ್ರೀತಿಯಲ್ಲೇ ಮಾತಾಡಿಸುತ್ತಿದ್ದ ಹಿಂದಿಯ ಕವಿತಾ ಟೀಚರ್, “ಕ್ಲಾಸಲ್ಲಿ ಗಮನವಿದೆ, ಮನೇಲೂ ಓದಿದ್ರೆ ಹುಷಾರಾಗುತ್ತಾನೆಂದು” ಹೆತ್ತವರಲ್ಲಿ ದೂರುತ್ತಿದ್ದ ಜಯರಾಂ ಸರ್ , ಇಂಗ್ಲೀಷಿನ ಸುಜಾತಾ ಟೀಚರ್, ಜೀವಶಾಸ್ತ್ರ  ಕಲಿಸುತ್ತಿದ್ದ ದಾಕ್ಷಾಯಿಣಿ ಟೀಚರ್, ಕನ್ನಡ ಸಂಧಿಗಳನ್ನು ಸರಳವಾಗಿ ಕಲಿಸಿದ ಉಪಮುಖ್ಯೋಪಾಧ್ಯಾಯರಾದ ಬಸವರಾಜ ಪಲ್ಲಕ್ಕಿ ಸರ್, ಗಣಿತ ಪಾಠ ಮಾಡುತ್ತಾ ಪ್ರಶ್ನೆ ಕೇಳಿ ಉತ್ತರ ಹೇಳದಿದ್ದಾಗ ಮುಖ ತುಂಬಾ ಡಷ್ಟರ್ ನಿಂದ ಮುಖಕ್ಕೆ ಪೌಡರ್ ಹಾಕುತ್ತಿದ್ದ ಪ್ರವೀಣ ಸರ್, ಬಾಲ್ ಬ್ಯಾಡ್ಮಿಂಟನ್ ಆಡಲು ಕಲಿಸಿದ ಶೀನ ಸರ್, ಅಮ್ಮೆಂಬಳದ ಮದ್ರಸದ ಶರೀಫ್ ಉಸ್ತಾದ್ , ನಈಮಿ ಉಸ್ತಾದ್, ಶಾಫಿ ಉಸ್ತಾದ್ ಇವರೆಲ್ಲರೂ ಪ್ರೌಢ ಶಿಕ್ಷಣವನ್ನು ನೀಡಿ ನಮ್ಮನ್ನು ಪ್ರೌಢವಾಗಿಯೇ ರೂಪಿಸಲು ಕಷ್ಟಪಟ್ಟವರು, ಮರೆಯಲಸಾಧ್ಯವಾದ ನೆನಪಿನಂಗಳದವರು.

ಪ್ರಥಮ ಪಿಯುಸಿಯ ಇತಿಹಾಸದ ವೀಣಾ ಮೇಡಂ, ಇಂಗ್ಲೀಷಿನ ಗಣಪತಿ ಸರ್ ಇವರಿಗೆ ತುಂಬಾ ಕೀಟಲೆ ಮಾಡಿದ್ದೆವು. ಇವಾಗ ಅದನ್ನು ನೆನೆದರೆ ಬೇಜಾರಾಗುತ್ತದೆ. ಆದರೆ ಶಿಕ್ಷಕರಾದ ಅವರು ನಮ್ಮನ್ನು ಮನ್ನಿಸಿರಬಹುದು ಎಂದು ನಂಬಿದ್ದೇನೆ ,ಪಿ.ಲಂಕೇಶ್ ಅವರ ಅವ್ವ ಕವಿತೆಯನ್ನು ಮನಮುಟ್ಟುವಂತೆ ಭೋಧಿಸಿದ 'ಮಂಚಿ' ಸರ್ , ಅರ್ಥಶಾಸ್ತ್ರದ ಲಾವಣ್ಯ ಮ್ಯಾಮ್ ಇವರೆಲ್ಲರೂ ನನ್ನೊಳಗೆ ಇನ್ನೂ ಚಿರನೆನಪಿನವರು .

ಪ್ರಥಮ ಪಿಯುಸಿಯಲ್ಲಿ ಪೀಕಲಾಟ ಮಾಡಿ ಡುಮ್ಕಿ ಹೊಡೆದು ಬ್ರೈಟ್ ಟ್ಯುಟೋರಿಲ್ ಗೆ ಸೇರಿದ್ದೆ. ಅಲ್ಲಿ ಅರ್ಥಶಾಸ್ತ್ರ ಭೋದಿಸಿದ ಸ್ಮಿತಾ ಮೇಡಂ, ಕನ್ನಡದ ರಾಜೇಶ್ ಸರ್, ಬ್ಯುಸಿನೆಸ್ ಸ್ಟಡಿ ಮತ್ತು ಅಕೌಂಟನ್ಸಿಯನ್ನು ರಾಗವಾಗಿ ಮಲಯಾಳಂ ಪ್ರವಚನದಂತೆ ಹೇಳಿಕೊಡುತ್ತಿದ್ದ ಇಸ್ಮಾಯಿಲ್ ಸರ್ , ಯಾವಾಗಲಾದರೊಮ್ಮೆ ರಾಜ್ಯಶಾಸ್ತ್ರದ ಬಗ್ಗೆ ಹೇಳುತ್ತಿದ್ದ ಪ್ರಿನ್ಸಿಪಾಲ್ ಜಲೀಲ್ ಸರ್, ಜಿಯೋಗ್ರಾಫಿ ಭೋಧಿಸಿದ ಸುಜಾತಾ ಮೇಡಂ, ಇಂಗ್ಲೀಷ್ ಗ್ರಾಮರ್ ಹೇಳಿಕೊಟ್ಟು ಪಿಯುಸಿಯಲ್ಲಿ ಕಷ್ಟದ ಇಂಗ್ಲೀಷ್ ರಾಕ್ಷಸನೊಂದಿಗೆ ಹೋರಾಡಿ ಜಯಿಸುವಂತೆ ಮಾಡಿದ ವೀಣಾ ಮೇಡಂ, ಅದೇ  ಹೊತ್ತು ನಂದಾವರದ ಆದಂ ಪೈಝೀ ಉಸ್ತಾದರೊಂದಿಗೂ ಇಸ್ಲಾಮಿಕ್ ಶಿಕ್ಷಣ ಪಡೆಯುತ್ತಿದ್ದೆ. ಆದಂ ಫೈಝಿ ಉಸ್ತಾದರು ನಾನು ಪಿಯುಸಿ ಪಾಸಾಗಿ ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದ ನಂತರವೂ ವಾರಕ್ಕೆ ಮೂರು ಕ್ಲಾಸಿಗೆ ಅನುಮತಿ ನೀಡಿದ್ದರು .

ಈಚೆಗೆ ಎರಡು ವರ್ಷದಿಂದ ನನಗೆ ಸಿಕ್ಕಿದ್ದು ಸ್ನೇಹಿತರಂತಹ ಪ್ರಾಧ್ಯಾಪಕರು. ಅರ್ಥಶಾಸ್ತ್ರದ ನಿತಿನ್ ಸರ್, ಆ ಬುಕ್ಕು ಓದು ಈ ಬುಕ್ಕು ಓದು ಎಂದು ಹೇಳುತ್ತಾ ಕನ್ನಡ ಭೋದಿಸಿದ ಅಬ್ದುಲ್ ರಹಿಮಾನ್ ಸರ್, ಆರ್ಥಿಕವಾಗಿ ಕಷ್ಟದಲ್ಲಿದ್ದಾಗ ಹೆಲ್ಪ್ ಮಾಡುತ್ತಾ ನನ್ನ ವಟವಟ ಮಾತನ್ನು ತಪ್ಪಿದ್ದರೂ ಒಪ್ಪಿ ನಂತರ ತಿದ್ದುವ ಜರ್ನಲಿಸಂನ ಪ್ರೀತ ಮೇಡಂ, ನಂಗೆ ಇಂಗ್ಲಿಷ್ ನೊಂದಿಗೆ ಕೋಪ ಎಂದು ಗೊತ್ತಿದ್ದರೂ "ಇಂಗ್ಲಿಷ್ ಓದಲು ಟ್ರೈ ಮಾಡು ನಝೀರ್ ಒಳ್ಳೊಳ್ಳೆ ಹಿಸ್ಟ್ರಿ ಪುಸ್ತಕಗಳಿವೆ" ಎನ್ನುತ್ತಾ ಇತಿಹಾಸ ಭೋಧಿಸುವ ಮಧುಶ್ರೀ ಮೇಡಂ,  ತುಂಬಾ ಪಾಪದ ಸಹನಾ ಮೇಡಂ, ನಾಲ್ಕೂ ಸೆಮ್ಮಲ್ಲಿ ಇಂಗ್ಲಿಷ್ ಪಾಸು ಮಾಡಿಸಿದ ಗಿರೀಶ್ ಸರ್, ಸುರೇಶ್ ಸರ್ , ಕನ್ನಡದ ಕೃಷ್ಣ ಸರ್, ಶಿಲ್ಪ ಮೇಡಂ,ಫರ್ಝಾನ ಮೇಡಂ, ಅಶ್ವಿನಿ ಮೇಡಂ, ಜರ್ನಲಿಸಂನ ಅಶ್ವಿನಿ ಮ್ಯಾಮ್, ಇತಿಹಾಸದ ಸುಪ್ರಿಯಾ ಮ್ಯಾಮ್, ಅರ್ಥಶಾಸ್ತ್ರದ ನಮ್ಮಿಷ್ಟದ ಬಾಬು ಸರ್ ಹೀಗೆ ಹೆಸರುಗಳು ಮುಂದುವರೆಯುತ್ತದೆ. ನನ್ನ ಜೀವನದ ಪ್ರತೀ ಮೆಟ್ಟಿಲಲ್ಲೂ ಶಿಕ್ಷಕರ ದಂಡೇ ಇದೆ .

ಶಾಲೆಗೆ ಅಥವಾ ಕಾಲೇಜಿಗೆ ಸೇರುವವರೆಗೂ ಯಾರೋ ಆಗಿರುತ್ತಿದ್ದ ನಾವು, ವಿಧ್ಯಾರ್ಥಿಗಳೆಂದು ಶಿಕ್ಷಕರಲ್ಲಿ ಸೇರಿದ ಕೂಡಲೇ ತೋರುವ ಪ್ರೀತಿ ,ಕಾಳಜಿ ,ಸ್ನೇಹ ,ವಾತ್ಸಲ್ಯ  ನಮ್ಮ ತಂದೆತಾಯಿಯಷ್ಟೇ ಸಮವಾಗಿರುತ್ತದೆ ಇದು ನನಗೆ ಯಾವಾಗಲೂ ಆಶ್ಚರ್ಯ ಮೂಡಿಸುತ್ತದೆ . ಇದು ಹೇಗೆ ಸಾಧ್ಯ ಎಂದು ಹಲವಾರು ಬಾರಿ ನನಗೆ ನಾನೇ ಪ್ರಶ್ನಿಸಿದ್ದೇನೆ ಮತ್ತು ಶಿಕ್ಷಕರು ತಂದೆ ತಾಯಿಗೆ ಸಮವಾಗಿದ್ದಾರೆ ಎಂಬ ಉತ್ತರವನ್ನೂ ಕಂಡುಕೊಂಡಿದ್ದೇನೆ . ತಂದೆ ತಾಯಿಯೊಂದಿಗೆ ಶಿಕ್ಷಕರಿಗೂ ಪ್ರತೀ ಪ್ರಾರ್ಥನೆಯಲ್ಲಿ ಪ್ರಾರ್ಥಿಸಬೇಕೆಂದು ಇಸ್ಲಾಂ ಕೂಡಾ ಕಲಿಸುತ್ತದೆ . ಇಲ್ಲಿ ಹೆಸರಿಸದೇ ಇರುವ ಶಿಕ್ಷಕರು ತುಂಬಾ ಇದ್ದಾರೆ . ಶಿಕ್ಷಕರೆಂದರೆ ಕೆಲವರು ಪಾಠ ಶಾಲೆಯಲ್ಲಿದ್ದವರಾದರೆ , ಜೀವನ ಪಾಠ ಕಲಿಸಿದವರು ಹೆಸರಿಸಲಾರದಷ್ಟು ಅಪಾರವಾಗಿದ್ದಾರೆ. ನನಗೆ ಅರಿವಿದೆ ಖಂಡಿತವಾಗಿಯೂ ನಾನೊಬ್ಬ ಅವಿಧೇಯ ವಿಧ್ಯಾರ್ಥಿ , ನನ್ನ ಅವಿಧೇಯತೆಯನ್ನು ಕ್ಷಮಿಸಿ,ಸಹಿಸಿ ಇಷ್ಟೆತ್ತರಕ್ಕೆ ಬೆಳೆಸಿದ್ದಕ್ಕೆ ಧನ್ಯವಾದಗಳು . ಸೃಷ್ಟಿಕರ್ತನೂ ಶಿಕ್ಷಕರಿಗೆಲ್ಲರಿಗೂ ಒಳಿತನ್ನೇ ಮಾಡಲಿ.

ಶಿಕ್ಷಕರ ದಿನಾಚರಣೆಯ ಶುಭಾಶಯಗಳೊಂದಿಗೆ

-ಬಾಪು ಅಮ್ಮೆಂಬಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News