×
Ad

ವಸತಿ ಯೋಜನೆ ಜಾರಿಗೆ ವಸತಿ ರಹಿತರ ನಿಖರ ಸಮೀಕ್ಷೆ ನಡೆಸಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-05 17:19 IST

ಬೆಂಗಳೂರು, ಸೆ.5: ರಾಜ್ಯದಲ್ಲಿ ವಸತಿ ರಹಿತರ ಸಮೀಕ್ಷೆ ನಡೆಸಿ ನಿಖರ ಮಾಹಿತಿ ಸಂಗ್ರಹಿಸಿ, ವಸತಿ ಯೋಜನೆಗಳನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು.

ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ 2011 ರ ಎಸ್‍ಇಸಿಸಿ ವರದಿಯನ್ವಯ ರಾಜ್ಯದಲ್ಲಿ ಒಟ್ಟು 73.33 ಲಕ್ಷ ಮನೆಗಳ ಬೇಡಿಕೆ ಇದ್ದು, ಈವರೆಗೆ 29.38 ಲಕ್ಷ ಮನೆಗಳನ್ನು ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ 44.06 ಹಾಗೂ ನಗರ ಪ್ರದೇಶದಲ್ಲಿ 29.27 ಲಕ್ಷ ಮನೆಗಳ ಬೇಡಿಕೆ ಇದೆ. ನಗರ ಪ್ರದೇಶದಲ್ಲಿ ಕೇವಲ 3.06 ಲಕ್ಷ ಮನೆ ಹಂಚಿಕೆ ಆಗಿರುವುದನ್ನು ಗಮನಿಸಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ನಗರ ಪ್ರದೇಶದ ವಸತಿ ಯೋಜನೆಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿ ಭೂಮಿಯ ಲಭ್ಯತೆ ಇಲ್ಲದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
2018-19ನೇ ಸಾಲಿನಲ್ಲಿ 10.72 ಲಕ್ಷ ಮನೆಗಳ ನಿರ್ಮಾಣ ಪ್ರಗತಿಯಲ್ಲಿದ್ದು, 4.24 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ರಾಜ್ಯದ ಎಲ್ಲ ಇಲಾಖೆಗಳ ಪ್ರಗತಿಗೆ ಹೋಲಿಸಿದರೆ, ವಸತಿ ಇಲಾಖೆಯು ಶೇ. 42 ರಷ್ಟು ಅನುದಾನ ಬಳಕೆ ಮಾಡಿ ಮೊದಲ ಸ್ಥಾನದಲ್ಲಿದೆ ಎಂದು ಮುಖ್ಯಕಾರ್ಯದರ್ಶಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ಕರ್ನಾಟಕ ಗೃಹ ಮಂಡಳಿ, ರೇರಾದ ಕಾರ್ಯಕ್ರಮಗಳು, ವಿವಿಧ ವಸತಿ ಯೋಜನೆಗಳ ಅನುಷ್ಠಾನಕ್ಕೆ ಇರುವ ತೊಡಕುಗಳ ನಿವಾರಣೆ ಕುರಿತು ಚರ್ಚಿಸಲಾಯಿತು.

ಬಸವ ವಸತಿ ಯೋಜನೆಯಡಿ 90 ದಿನಗಳಿಗಿಂತಲೂ ಹೆಚ್ಚಿನ ಕಾಲಾವಕಾಶ ನೀಡಿದ್ದರೂ ಸಹ ಪ್ರಾರಂಭವಾಗದ ಹಿನ್ನೆಲೆಯಲ್ಲಿ 69 ಸಾವಿರ ಮನೆಗಳನ್ನು ರದ್ದುಪಡಿಸಲಾಗಿತ್ತು. ಮುಖ್ಯಮಂತ್ರಿಗಳ ಸೂಚನೆಯಂತೆ ಈ ಮನೆಗಳಲ್ಲಿ ಪ್ರಾರಂಭವಾಗಿರುವ ಮನೆಗಳನ್ನು ಜಿಪಿಎಸ್‍ಗೆ ಅಳವಡಿಸಲು ಅವಕಾಶ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದರು.

ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜೀವ್‍ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News