ಬಿಎಸ್‌ವೈ ಪುತ್ರ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದು ಸತ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-05 12:39 GMT

ಬೆಂಗಳೂರು, ಸೆ. 5: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಪುತ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿರುವುದು ಸತ್ಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲದಕ್ಕೂ ದಾಖಲೆ ನೀಡಲು ಸಾಧ್ಯವಿಲ್ಲ. ಸಮರ್ಪಕ ಮಾಹಿತಿ ಇಲ್ಲದೆ ನಾನು ಎಂದೂ ಮಾತನಾಡುವುದಿಲ್ಲ. ಸುಖಾ ಸುಮ್ಮನೆ ಸುಳ್ಳು ಹೇಳುವುದು ನನ್ನ ಜಾಯಮಾನವಲ್ಲ ಎಂದರು.

ಕೋರ್ಟ್ ವಿಚಾರ ಸಂಬಂಧ ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದನ್ನು ಈಗಾಗಲೇ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರಲ್ಲ ಎಂದು ಪ್ರಶ್ನಿಸಿದ ಅವರು, ಶ್ವೇತಪತ್ರ ಹೊರಡಿಸಿದರೆ ತೃಪ್ತಿಯಾಗಲ್ಲ, ಎಲ್ಲವನ್ನೂ ಕೇಸರಿ ಪತ್ರದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದರು.

ಅವರು ಏನೇನು ಮಾಡುತ್ತಿದ್ದಾರೆ, ಇಲ್ಲಿ ಏನೇನು ನಡೆಯುತ್ತಿದೆ ಎಂದು ಎಲ್ಲವೂ ನನಗೆ ಗೊತ್ತಿದೆ. ನನಗೆ ತಿಳಿದೇ ಹೇಳಿದ್ದೇನೆ. ಅವರು ಹೋದ ಕಡೆಗೆ ನಾನು ಕ್ಯಾಮರಾ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ. ಅವರ ಕೇಸುಗಳು ಆದಾಯ ತೆರಿಗೆ ಇಲಾಖೆಯಲ್ಲಿವೆಯೇ? ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಪುರಾವೆ ನೀಡಲಿ:

‘ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತವಾಗಿ ಹೇಳಿಕೆ ನೀಡಬೇಕು. ನನಗೂ ಅದಕ್ಕೂ ಯಾವುದೇ ಸಂಬಂಧವಿದ್ದರೆ ಅವರು ಪುರಾವೆ ನೀಡಲಿ. ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳಲ್ಲಿ ನಮ್ಮ ಮೇಲೆ ಪ್ರಕರಣಗಳಿದ್ದು, ಅವುಗಳಿಂದ ಹೊರ ಬರಲು ಓಡಾಡುತ್ತಿದ್ದೇವೆ. ಅನಗತ್ಯ ಆರೋಪ ಮಾಡಿ ಮತ್ತೊಬ್ಬರನ್ನು ಬಲಿಪಶು ಮಾಡಬೇಡಿ’

-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

ಅಸ್ಥಿರ ಮನಸ್ಸಿನ ಪ್ರತೀಕ:

‘ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಎಸ್‌ವೈ ಪುತ್ರರು ಐಟಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆಂಬ ಸಿಎಂ ಹೇಳಿಕೆ ಅವರ ಅಸ್ಥಿರ ಮನಸ್ಥಿತಿಯ ಪ್ರತೀಕ. ಇದರಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಅತ್ಯಂತ ಬಾಲಿಷ ಹೇಳಿಕೆ’

-ವಿಜಯೇಂದ್ರ, ಬಿಎಸ್‌ವೈ ಪುತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News