ಆರೆಸ್ಸೆಸ್ ಬಹುಮುಖಿ ರಾಕ್ಷಸ, ಸನಾತನ ಸಂಸ್ಥೆ ಉಗ್ರ ಸಂಘಟನೆ: ಸ್ವಾಮಿ ಅಗ್ನಿವೇಶ್

Update: 2018-09-05 13:34 GMT

ಬೆಂಗಳೂರು, ಸೆ.5: ಶೋಷಿತ ಸಮುದಾಯಗಳ ಪರ ಧ್ವನಿಗೂಡಿಸುವವರನ್ನು ಗುರಿಯಾಗಿಸಿಕೊಂಡು ‘ನಗರ ನಕ್ಸಲರು’ ಎಂದು ಕರೆಯುವುದಾದರೆ, ನಾವೂ ನಕ್ಸಲರು ಆಗಲು ಬಯಸುತ್ತೇವೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಇಂದಿಲ್ಲಿ ಹೇಳಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಗೌರಿ ಲಂಕೇಶ್ ಬಳಗದ ಸದಸ್ಯರು ಹಮ್ಮಿಕೊಂಡಿದ್ದ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯೊಬ್ಬ ಸಂಘಪರಿವಾರದ ಪ್ರಚಾರಕ ಎಂದು ವಾಗ್ದಾಳಿ ನಡೆಸಿದ ಅವರು, ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ವೇಳೆ ಗುಜರಾತ್ ಅನ್ನು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡರು. ಬಳಿಕ ಎಲ್ಲ ಕಡೆ ಸಂಘಪರಿವಾರದ ಸದಸ್ಯರಿಗೆ ಅಧಿಕಾರ ನೀಡಿ ಕೇಸರಿ ವಾತಾವರಣ ನಿರ್ಮಿಸಿದ್ದರು. ಈಗಲೂ, ಸಂಘಪರಿವಾರದ ಪ್ರಚಾರಕರೇ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದರು.

ಆರೆಸ್ಸೆಸ್ ಎಂಬುದು ಒಂದೇ ಅಲ್ಲ. ಅದೊಂದು ಬಹುಮುಖಿ ರಾಕ್ಷಸ. ಬೇರೆ ಬೇರೆ ಹೆಸರುಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ಹಿಂದೂಗಳ ರಕ್ಷಣೆ ಎನ್ನುವವರಿಗೆ, ಗೌರಿ ಲಂಕೇಶ್, ವಿಚಾರವಾದಿಗಳಾದ ಡಾ.ಎಂ.ಎಂ.ಕಲಬುರ್ಗಿ, ಗೋವಿಂದ ಪನ್ಸಾರೆ, ದಾಭೋಲ್ಕರ್ ಹಿಂದೂಗಳಾಗಿ ಕಾಣುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಸನಾತನ ಸಂಸ್ಥೆ ಸಾಮಾನ್ಯ ಧರ್ಮಪ್ರಚಾರಕ ಸಂಸ್ಥೆಯಲ್ಲ. ಅದೊಂದು ಉಗ್ರ ಸಂಘಟನೆ ಇದ್ದಂತೆ. ಅದರ ಮೇಲೆ ಅಪರಾಧ ತನಿಖಾ ಸಂಸ್ಥೆಗಳು ನಿಗಾ ಇಡಬೇಕು. ಜೊತೆಗೆ ಈ ಕೂಡಲೇ ಕೃತ್ಯದಲ್ಲಿ ಭಾಗಿಯಾಗಿರುವ ಸಂಘಟನೆಗಳನ್ನು ನಿಷೇಧಿಸಿ, ಹತ್ಯೆಯ ಪ್ರಾಯೋಜಕರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಗ್ನಿವೇಶ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News