ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಗೆ 1 ಸಾವಿರ ಶಿಕ್ಷಕರ ನೇಮಕ: ಕುಮಾರಸ್ವಾಮಿ

Update: 2018-09-05 13:39 GMT

ಬೆಂಗಳೂರು, ಸೆ. 5: ರಾಜ್ಯದಲ್ಲಿನ ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆ ಮಾಡಲು ಹೊಸದಾಗಿ ಒಂದು ಸಾವಿರ ಶಿಕ್ಷಕರನ್ನು ಶೀಘ್ರದಲ್ಲೆ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಕೇವಲ ಖಾಸಗಿ ಶಾಲೆಗಳ ಶ್ರೀಮಂತರ ಮಕ್ಕಳಿಗೆ ಎಂಬ ಭಾವನೆ ದೂರ ಮಾಡುವ ದೃಷ್ಟಿಯಿಂದ ಹಾಗೂ ಬಡವರ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಸರಕಾರಿ ಶಾಲೆಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಇಂಗ್ಲಿಷ್ ಕಲಿಯಬೇಕು. ಖಾಸಗಿ ಶಾಲೆಯಲ್ಲಿನ ಮಕ್ಕಳು ಮಾತ್ರ ಇಂಗ್ಲಿಷ್ ಕಲಿಯುತ್ತಾರೆಂಬ ಕೀಳರಿಮೆ ತಪ್ಪಿಸಲು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆಗೆ ನಿರ್ಧರಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿನ 1 ಸಾವಿರ ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸಲು ಆಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು. ಇದಕ್ಕೆ ‘ಕನ್ನಡ ಉಳಿಸುತ್ತೇವೆ’ ಎನ್ನುವ ಕೆಲವರು ತಕರಾರು ತೆಗೆದರು. ಆದರೆ ವಾಸ್ತವವಾಗಿ ಅಂತಹ ಹೋರಾಟಗಾರರ ಮಕ್ಕಳು, ಮೊಮ್ಮಕ್ಕಳು ಖಾಸಗಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದರು. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದರಿಂದ ಯಾವುದೇ ಕಾರಣಕ್ಕೆ ಕನ್ನಡ ಭಾಷೆಗೆ ಅಡ್ಡಿಯಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ದೃಷ್ಟಿಯಿಂದ ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಹಕರಿಸಿ: ವರ್ಗಾವಣೆ ವಿಚಾರದಲ್ಲಿ ಶಿಕ್ಷಕರ ಸರಕಾರದೊಂದಿಗೆ ಸಹಕರಿಸಬೇಕು. ಶೈಕ್ಷಣಿಕ ದೃಷ್ಟಿಯಿಂದ ಶಿಕ್ಷಕರ ವರ್ಗಾವಣೆ ಸಂಬಂಧ ನಿಯಮಾವಳಿಯನ್ನು ರೂಪಿಸಿದ್ದು, ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದ ಅವರು, ಯಾವುದೇ ಕಾರಣಕ್ಕೂ ಶಿಕ್ಷಕರು ಬೀದಿಗೆ ಬರಬಾರದು ಎಂದರು.

ಹೊಸದಿಲ್ಲಿ ಮಾದರಿಯಲ್ಲೆ ಶಿಕ್ಷಕರ ಬೋಧನಾ ಕೌಶಲ್ಯ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅವರನ್ನು ವಿದೇಶಕ್ಕೆ ಕಳುಹಿಸುವುದರ ಜೊತೆಗೆ ಅವರಿಗೆ ತಿಂಗಳಿಗೆ ಒಮ್ಮೆ ತಜ್ಞರಿಂದ ತರಬೇತಿ ಕೊಡಿಸಲು ಉದ್ದೇಶಿಸಲಾಗಿದೆ ಎಂದ ಅವರು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟದಲ್ಲಿ ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುವುದು ಎಂದರು.

ಉತ್ತಮ ಶಿಕ್ಷಕರಿಗೆ ಸನ್ಮಾನ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯ ಮಧ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಶಂಕರ್ ಸೇರಿದಂತೆ 75 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಹೇಶ್, ಮಾಜಿ ಸಚಿವ ರೋಷನ್ ಬೇಗ್, ಮೇಲ್ಮನೆ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಜಿ.ಪಂ. ಅಧ್ಯಕ್ಷ ಮುನಿರಾಜು, ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಆಯುಕ್ತ ಪಿ.ಸಿ. ಜಾಫರ್, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಹಾಜರಿದ್ದರು.

‘ರಾಜ್ಯ ಆರ್ಥಿಕ ಸ್ಥಿತಿ ಅತ್ಯಂತ ಸದೃಢವಾಗಿದೆ. ಸಂಪನ್ಮೂಲ ಕ್ರೋಢೀಕರಣದಲ್ಲಿ ನಿಗದಿತ ಗುರಿ ಮೀರಿದ್ದು, ಸರಕಾರ ದಾಖಲೆ ನಿರ್ಮಾಣ ಮಾಡಿದೆ. 45ಸಾವಿರ ಕೋಟಿ ರೂ.ಸಾಲಮನ್ನಾ ಮಾಡಿದ್ದರೂ ಆರ್ಥಿಕ ಶಿಸ್ತನ್ನು ಉಲ್ಲಂಘಿಸಿಲ್ಲ. ಶಾಲಾ-ಕಾಲೇಜು ಮೂಲಸೌಕರ್ಯಕ್ಕೆ 1ಸಾವಿರ ಕೋಟಿ ರೂ.ಒದಗಿಸಲಾಗಿದೆ’

-ಕುಮಾರಸ್ವಾಮಿ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News