ಸಲಹೆ, ಸೂಚನೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-05 14:50 GMT

ಬೆಂಗಳೂರು, ಸೆ.5: ಕೃಷಿ ವಿಜ್ಞಾನಿಗಳು, ತಜ್ಞರು ಹಾಗೂ ಕೃಷಿ ಕ್ಷೇತ್ರದಲ್ಲಿ ಪರಿಣಿತಿಯುಳ್ಳವರು ನೀಡುವ ಸಲಹೆ, ಸೂಚನೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವ ಮೂಲಕ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬುಧವಾರ ನಗರದ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ 'ಭಾರತೀಯ ತಂತ್ರಜ್ಞಾನ ಸಮಾವೇಶ'ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಕೃಷಿ ಕ್ಷೇತ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಅನ್ನ ನೀಡುವ ರೈತ ಸಮುದಾಯ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ಕೃಷಿ ಕ್ಷೇತ್ರದಲ್ಲಿ ಅನುಭವವಿರುವ ತಜ್ಞರು, ಅನುಭವಿಗಳು ಹಾಗೂ ತಂತ್ರಜ್ಞರು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗುವ ನೂತನ ತಂತ್ರಜ್ಞಾನಗಳ ಬಗ್ಗೆ ಸರಕಾರದೊಂದಿಗೆ ಮಾತುಕತೆ ನಡೆಸಿದರೆ, ಅದನ್ನು ಪರಿಶೀಲಿಸಿ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮತ್ತು ರೈತರ ಉತ್ತೇಜನಕ್ಕೆ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇತ್ತೀಚೆಗೆ, ವೈಜ್ಞಾನಿಕ ಕೃಷಿ ಪದ್ಧತಿ ಜಾರಿಗೆ ಸಂಬಂಧಿಸಿದಂತೆ ಅಗ್ರೋ ಇನ್ನೋವೇಟಿವ್ ಸೆಂಟರ್ ಪ್ರಾರಂಭ ಮಾಡಿದೆ. ಉದ್ಯಮಿಗಳು ಮತ್ತು ತಂತ್ರಜ್ಞರು ಸರಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಗೆ ಉತ್ತೇಜನ ನೀಡುವಂತಹ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

ಬೆಂಗಳೂರು ವಿಶ್ವ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಗಮನ ಸೆಳೆದಿದೆ. ಇದೇ ಮಾದರಿಯಲ್ಲಿ ಕೃತಕ ಬುದ್ಧಿಮತ್ತೆ, ರೋಬೋಟಿಕ್ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ ಸೇರಿದಂತೆ ಮತ್ತಿತರೆ ತಾಂತ್ರಿಕ ಅನ್ವೇಷಣೆಗಳಿಗೆ ಸರಕಾರ ಹೆಚ್ಚು ಒತ್ತು ನೀಡಿದೆ ಎಂದರು.

ರಾಜ್ಯದಲ್ಲಿ ನುರಿತ ಮತ್ತು ಉತ್ತಮ ಕೌಶಲ್ಯವನ್ನು ಹೊಂದಿರುವ ವೃತ್ತಿಪರರು ನಮ್ಮಲ್ಲಿದ್ದಾರೆ. ಜತೆಗೆ ದೇಶದಲ್ಲೇ ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿವೆ. ಹಾಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ಈ ಎಲ್ಲಾ ಅಂಶಗಳು ಕಾರಣವಾಗಿವೆ. ಆದುದರಿಂದ ಇಲ್ಲಿ ನಡೆಯುತ್ತಿರುವ ಸಮಾವೇಶ ನಮ್ಮ ಸಮಾಜ ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ವಿಜ್ಞಾನಿಗಳಾದ ಪದ್ಮಶ್ರೀ ಎಚ್.ಸಿ.ವಿಶ್ವೇಶ್ವರಯ್ಯ ಹಾಗೂ ನಿವೃತ್ತ ಲೆ.ಜ.ವಿ.ಜೆ.ಸುಂದರರಾಮ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮ್ಮೇಳನದ ಹೊರಭಾಗ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಟಬ್ರೋ ಚಾರ್ಜರ್, ಕಾವೇರಿ ಎಂಜಿನ್ ಬ್ಲೇಡ್ಸ್, ಲಕ್ಷಯ್ ಮತ್ತು ರುಸ್ತುಂ ಪೈಲೆಟ್ ರಹಿತ ಯುದ್ಧ ವಿಮಾನಗಳ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲದೆ, ಕರ್ನಾಟಕ ರಾಜ್ಯ ತೆಂಗು ಅಭಿವೃದ್ಧಿ ಮಂಡಳಿ ವತಿಯಿಂದ ವಿವಿಧ ತೆಂಗಿನ ಉತ್ಪನ್ನಗಳು ಹಾಗೂ ತೆಂಗಿನ ಕಾಯಿಗಳು, ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯವು ಹಲಸು, ಟೊಮೆಟೋ, ಬಾಳೆ, ಸಪೋಟ ಇತ್ಯಾದಿ ಒಣಹಣ್ಣುಗಳನ್ನು ಪ್ರದರ್ಶಿಸಿದ್ದರು.

ಕಾರ್ಯಕ್ರಮದಲ್ಲಿ ಭಾರತೀಯ ತಂತ್ರಜ್ಞಾನ ಸಮಾವೇಶದ ಅಧ್ಯಕ್ಷ ಡಾ.ಎಲ್.ವಿ.ಮುರಳಿಕೃಷ್ಣ ರೆಡ್ಡಿ, ಇಂಡಿಯನ್ ಇನ್ಸ್‌ಟಿಟ್ಯೂಷನ್ ಆ್ ಪ್ರೊಡಕ್ಷನ್ ಇಂಜಿನಿಯರ್ಸ್‌ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಡಾ.ವೂಡೆ ಪಿ.ಕೃಷ್ಣ, ಭಾರತೀಯ ವಿಶ್ವವಿದ್ಯಾಲಯಗಳ ಒಕ್ಕೂಟದ ಅಧ್ಯಕ್ಷ ಡಾ.ಸಂದೀಪ್ ಸಂಚೇತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News