ದುಬೈ- ನ್ಯೂಯಾರ್ಕ್ ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಅಸ್ವಸ್ಥ !

Update: 2018-09-06 04:46 GMT

ನ್ಯೂಯಾರ್ಕ್, ಸೆ. 6: ದುಬೈನಿಂದ ನ್ಯೂಯಾರ್ಕ್‌ಗೆ ಆಗಮಿಸಿದ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 100ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಅಸ್ವಸ್ಥಗೊಂಡಿರುವ ಘಟನೆ ವರದಿಯಾಗಿದೆ.

ಇಲ್ಲಿನ ಜಾನ್ ಎಫ್.ಕೆನಡಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಮಾನ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಆರೋಗ್ಯ ಕಾರ್ಯಕರ್ತರು ಮಾಡುತ್ತಿ ದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಪ್ರಕಟಿಸಿದೆ.

"ಎಮಿರೇಟ್ಸ್ ವಿಮಾನ- 521, ಮುಂಜಾನೆ 9 ಗಂಟೆಗೆ ಜೆಎಫ್‌ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ವಿಮಾನದಲ್ಲಿದ್ದ 521 ಮಂದಿಯ ಪೈಕಿ ಹಲವರಲ್ಲಿ ಕಫ ಮತ್ತು ಜ್ವರದ ಲಕ್ಷಣ ಕಾಣಿಸಿಕೊಂಡಿದೆ" ಎಂದು ಪ್ರಕಟಣೆ ಹೇಳಿದೆ.

ವಿಮಾನದಲ್ಲಿ 10 ಮಂದಿ ಅಸ್ವಸ್ಥರನ್ನು ಈ ಮಧ್ಯಪ್ರಾಚ್ಯ ದೇಶದಿಂದ ಆಸ್ಪತ್ರೆಗೆ ಕರೆತರಲಾಗುತ್ತಿತ್ತು ಎಂದು ದುಬೈ ಮೂಲದ ಎಮಿರೇಟ್ಸ್ ಹೇಳಿಕೆ ನೀಡಿದೆ. ಆದರೆ ಯಾವ ರೋಗಲಕ್ಷಣ ಮತ್ತು ಸ್ವರೂಪದ ಬಗ್ಗೆ ಏನನ್ನೂ ಹೇಳಿಲ್ಲ. ಇದು ಡಬ್ಬಲ್ ಡೆಕ್ ಏರ್‌ಬಸ್ ಎ-388 ವಿಮಾನವಾಗಿದ್ದು, ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನವಾಗಿದೆ.

ವಿಮಾನ ನಿಲ್ದಾಣದ ಸಾರ್ವಜನಿಕ ಆರೋಗ್ಯಾಧಿಕಾರಿಗಳು ಇತರ ಏಜೆನ್ಸಿಗಳ ತಜ್ಞರ ನೆರವಿನಿಂದ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಕ್ತಾರ ಬೆಂಜಮಿನ್ ಹೇನ್ಸ್ ಹೇಳಿದ್ದಾರೆ. ಅಸ್ವಸ್ಥರಲ್ಲದ ಪ್ರಯಾಣಿಕರಿಗೆ ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಗಿದೆ. ಕೆಲ ಅಸ್ವಸ್ಥ ಪ್ರಯಾಣಿಕರನ್ನು ಜಮೈಕಾ ಹಾಸ್ಪಿಟಲ್ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಗಿದೆ. ಆದರೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ನ್ಯೂಯಾರ್ಕ್ ಅಗ್ನಿಶಾಮಕ ವಿಭಾಗದ ವಕ್ತಾರರು ಹೇಳಿದ್ದಾರೆ.

ವಿಮಾನದ ಹೊರಗೆ ಹತ್ತಾರು ಪೊಲೀಸ್ ವಾಹನಗಳು ಹಾಗೂ ತುರ್ತು ವಾಹನಗಳು ನಿಂತಿರುವ ಚಿತ್ರಗಳನ್ನು ವಿಮಾನದಲ್ಲಿದ್ದ ಲಾರ್ರಿ ಕೊಹೆನ್ ಎಂಬ ಪ್ರಯಾಣಿಕರೊಬ್ಬರು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News