ಋಣಭಾರ ಮಸೂದೆ: ಸಾಲ ಮರುಪಾವತಿಗೆ ಒತ್ತಡ ಹೇರದಂತೆ ನಿಗಾವಹಿಸಲು ಡಿಜಿಪಿ ನೀಲಮಣಿ ರಾಜು ಸೂಚನೆ

Update: 2018-09-06 14:08 GMT

ಬೆಂಗಳೂರು, ಸೆ. 6: ‘ಕರ್ನಾಟಕ ಋಣಭಾರ ಮಸೂದೆ’ ಜಾರಿಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು, ಲೇವಾದೇವಿಗಾರರು ಸಾರ್ವಜನಿಕರು ಮತ್ತು ವಿಶೇಷವಾಗಿ ರೈತರಿಗೆ ಸಾಲ ಮರು ಪಾವತಿಗೆ ಒತ್ತಡ ಹೇರದಂತೆ ನಿಗಾವಹಿಸಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಸುತ್ತೋಲೆ ಹೊರಡಿಸಿದ್ದಾರೆ.

ಹೆಚ್ಚಿನ ಪ್ರಮಾಣದ ಬಡ್ಡಿ ವಸೂಲಿ ಮತ್ತು ಸಾಲ ಮರುಪಾವತಿಗಾಗಿ ಸಾರ್ವಜನಿಕರು ಮತ್ತು ರೈತರನ್ನು ಶೋಷಿಸುತ್ತಿರುವ ಬಗ್ಗೆ ಯಾವುದೇ ರೂಪದಲ್ಲಿ ದೂರ ಬಂದರೆ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು. ಪ್ರತಿಯೊಂದು ಜಿಲ್ಲೆ ಮತ್ತು ನಗರ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸಹಾಯವಾಣಿ/ನಿಯಂತ್ರಣ ಕೊಠಡಿ ಮೂಲಕ ಸ್ವೀಕರಿಸಿದ ಮಾಹಿತಿಯನ್ನು ವಿಳಂಬಕ್ಕೆ ಆಸ್ಪದವಿಲ್ಲದೆ ಜಿಲ್ಲಾ ಮಟ್ಟದಲ್ಲಿ ಮೇಲಾಧಿಕಾರಿಗಳಿಗೆ ಹಾಗೂ ನಗರ ಮಟ್ಟದಲ್ಲಿ ಡಿಸಿಪಿಗೆ ರವಾನಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಜತೆಗೆ ಜಾಲತಾಣ ಸೇರಿದಂತೆ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಅವರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News