ಹೈ.ಕ. ಅಭಿವೃದ್ಧಿಗೆ ವಿಶೇಷ ಮುತುವರ್ಜಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-09-06 14:10 GMT

ಬೆಂಗಳೂರು, ಸೆ. 6: ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳಲಾಗುವುದು. ಆ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಲು ಕಲಬುರಗಿಯಲ್ಲಿ ವಿಶೇಷ ಸಭೆ ಕರೆದು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಜಿ ಶಾಸಕ ವೈಜನಾಥ ಪಾಟೀಲ ನೇತೃತ್ವದಲ್ಲಿ ಹೈ.ಕ.ಹೋರಾಟ ಸಮಿತಿಯ ನಿಯೋಗವು ಹೈ.ಕ.ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಹೈ.ಕ.ವಲಯದಲ್ಲಿ ಶಿಕ್ಷಣ, ಉದ್ಯೋಗ ಸೃಷ್ಟಿ ಮತ್ತಿತರ ಅಭಿವೃದ್ಧಿ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರ ಸಮಗ್ರವಾಗಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ಇನ್ನು ಕೆಲವೇ ದಿನಗಳಲ್ಲಿ ಆ ಭಾಗದ ಸಮಸ್ಯೆಗಳ ಕುರಿತು ಎಲ್ಲ ಜಿಲ್ಲೆಗಳಿಂದ ಪ್ರತಿನಿಧಿಗಳನ್ನು ಕರೆದು ಚರ್ಚೆ ನಡೆಸಲಾಗುವುದು ಎಂದ ಅವರು, ಸರಕಾರ ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ. ಕಲಬುರಗಿಯಲ್ಲಿ ಸೋಲಾರ್ ಉಪಕರಣ ತಯಾರಿಕೆ, ಬೀದರ್‌ನಲ್ಲಿ ಕೃಷಿ ಉಪಕರಣ ತಯಾರಿಕೆ, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಆಟಿಕೆಗಳ ತಯಾರಿಕೆ, ಬಳ್ಳಾರಿಯಲ್ಲಿ ವಸ್ತ್ರೋದ್ಯಮದ ಕ್ಲಸ್ಟರ್ ಸ್ಥಾಪಿಸಲು ಉದ್ದೇಶಿಸಿದ್ದು, ಈ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಿದೆ ಎಂದರು.

ಹೈ.ಕ.ಭಾಗಕ್ಕೆ ಸಾಕಷ್ಟು ಅನುದಾನ ನೀಡಿದರೂ, ಅದನ್ನು ಸಮರ್ಪಕವಾಗಿ ವೆಚ್ಚ ಮಾಡಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸುವುದು ಎಂದು ಅವರು ಹೇಳಿದರು.

ಸಂವಿಧಾನದ 371 (ಜೆ) ತಿದ್ದುಪಡಿ ಅನ್ವಯ ಹೈ.ಕ.ಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ಕಾಯ್ದೆಗೆ ಹಲವು ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಹಲವು ಲೋಪಗಳಿವೆ ಎಂದು ನಿಯೋಗ ಸಿಎಂ ಗಮನಕ್ಕೆ ತಂದಿತ್ತು. ಈ ಕುರಿತು ವಿಶೇಷ ಮುತುವರ್ಜಿ ವಹಿಸಿ, ಕ್ರಮ ಕೈಗೊಳ್ಳುವುದು. ಅಲ್ಲದೆ, ಕಲಬುರಗಿಯಲ್ಲಿ ಹೈ.ಕ.ವಿಶೇಷ ಕೋಶ ಸ್ಥಾಪಿಸುವ ಕುರಿತು ಪರಿಶೀಲಿಸುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News