ಕೃಷಿ ಜಮೀನಿನಲ್ಲಿ ಎಕರೆಗೆ 20 ಮರ ನೆಡುವುದು ಕಡ್ಡಾಯ: ಅರಣ್ಯ ಸಚಿವ ವಿ.ಶಂಕರ್

Update: 2018-09-06 14:32 GMT

ಬೆಂಗಳೂರು, ಸೆ. 6: ರಾಜ್ಯದಲ್ಲಿ ಪರಿಸರ ಹೆಚ್ಚಿಸುವ ಅಗತ್ಯತೆ ಹಿನ್ನೆಲೆಯಲ್ಲಿ ಕೃಷಿ ಜಮೀನಿನಲ್ಲಿ ಒಂದು ಎಕರೆಗೆ ಕನಿಷ್ಠ 20 ಮರಗಳನ್ನು ನೆಟ್ಟು ಪೋಷಿಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ತರಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಸಚಿವ ವಿ.ಶಂಕರ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೆಬ್‌ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ‘ಹಸಿರು ಕರ್ನಾಟಕ’ ಯೋಜನೆಯನ್ನು ಘೋಷಿಸಿದ್ದು, ರಾಜ್ಯದಲ್ಲಿ 10 ಕೋಟಿ ಸಸಿ ನೆಡಲು ಚಾಲನೆ ನೀಡಲಾಗಿದೆ ಎಂದರು.

ಕೃಷಿ ಭೂಮಿಯಲ್ಲಿ ಕೃಷಿಕರು ಸಸಿ ನೆಟ್ಟು ಅವುಗಳನ್ನು ಪೋಷಿಸಿದರೆ ಅವರಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಇದರಿಂದ ಕೃಷಿಕರ ಆದಾಯವೂ ವೃದ್ಧಿಸಲಿದೆ ಎಂದ ಅವರು, ಪರಿಸರ ಸಮತೋಲನಕ್ಕೂ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಸಂಪುಟದಲ್ಲಿ ಚರ್ಚೆ: ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ.ಕೆ.ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಕೋರಿಕೆಯಂತೆ ರಾಜ್ಯ ಸರಕಾರ ವಿರೋಧಿಸಿತ್ತು. ಇದೀಗ ಪುನರ್ ಪರಿಶೀಲಿಸಲು ಕೇಂದ್ರ ಸರಕಾರ ಕೋರಿದ್ದು, ಈ ಸಂಬಂಧ ಸಂಪುಟದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಣೆ ನೀಡಿದರು.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಈ ಕುರಿತು ಇತ್ತೀಚೆಗಷ್ಟೇ ನೀಡಿರುವ ತೀರ್ಪಿನ ಬಗ್ಗೆಯೂ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರು ಚರ್ಚಿಸಿ ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕರಿಗೂ ತೊಂದರೆ ಆಗದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಒಪಿ ಮೂರ್ತಿಗಳಿಗೆ ಕಡಿವಾಣ: ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪಿಒಪಿ ಗಣೇಶ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕೆಂದು ಈಗಾಗಲೇ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದರು.

ಎರಡು ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಜಾಗೃತಿಯ ಪರಿಣಾಮ ಶೇ.65ರಷ್ಟು ಪಿಒಪಿ ಮೂರ್ತಿಗಳಿಗೆ ಕಡಿವಾಣ ಹಾಕಲಾಗಿದೆ. ಹೊರ ರಾಜ್ಯದಿಂದ ಬರುವ ಪಿಒಪಿ ಮೂರ್ತಿಗಳನ್ನು ನಿಯಂತ್ರಣಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

‘ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೆಬ್‌ಸೈಟ್ ಉದ್ಘಾಟಿಸಿದ್ದು, ಮೈಸೂರು, ಬನ್ನೇರುಘಟ್ಟ, ಬಳ್ಳಾರಿ, ಕಲಬುರ್ಗಿ, ದಾವಣಗೆರೆ, ಗದಗ, ಬೆಳಗಾವಿ, ಹೊಸಪೇಟೆ ಸೇರಿ 9 ಮೃಗಾಲಯಗಳಿದ್ದು, ಅಲ್ಲಿನ ಪ್ರಾಣಿ, ಪಕ್ಷಗಳ ಮಾಹಿತಿಯನ್ನು ಪ್ರವಾಸಿಗರಿಗೆ ವೆಬ್‌ಸೈಟ್ ಮೂಲಕ ದೊರೆಯಲಿದೆ’

-ವಿ.ಶಂಕರ್ ಅರಣ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News