ವಕ್ಫ್ ಆಸ್ತಿ ಕಬಳಿಕೆ ಆರೋಪ: ಅನ್ವರ್ ಮಾಣಿಪ್ಪಾಡಿ ವರದಿ ವಿಧಾನ ಮಂಡಲದಲ್ಲಿ ಮಂಡಿಸಲು ಬಿಜೆಪಿ ಆಗ್ರಹ

Update: 2018-09-06 14:38 GMT

ಬೆಂಗಳೂರು, ಸೆ. 6: ವಕ್ಫ್ ಆಸ್ತಿ ಕಬಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಸಂಬಂಧ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸೌಧದ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಗುರುವಾರ ಇಲ್ಲಿನ ಗಾಂಧಿ ಪುತ್ಥಳಿ ಬಳಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ಅಧ್ಯಕ್ಷತೆಯಲ್ಲಿ ಧರಣಿ ನಡೆಸಿದ ಶಾಸಕರು, ವಕ್ಫ್ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಕೂಡಲೇ ರಾಜ್ಯ ಸರಕಾರ ಈ ಪ್ರಕರಣ ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರಕ್ಕೆ ಕಣ್ಣಿಲ್ಲ, ಕಿವಿಯೂ ಇಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದರೆ ಅದಕ್ಕೆ ಬಿಜೆಪಿ ಕಾರಣವಲ್ಲ. ಅಲ್ಪಸಂಖ್ಯಾತರಿಗೆ ಮಾಡಿರುವ ದ್ರೋಹಕ್ಕೆ, ಅವರ ಶಾಪಕ್ಕೆ ಸರಕಾರ ಉರುಳಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಶಾಸಕರು ಧರಣಿ ನಡೆಸುತ್ತಿದ್ದರೂ ಸರಕಾರದ ಯಾವ ಪ್ರತಿನಿಧಿಯೂ ಬಂದಿಲ್ಲ. ಶೇ.50ರಷ್ಟು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾರೆ. ಸರಕಾರ ಎಲ್ಲಿ ಉರುಳಿ ಹೋಗುತ್ತದೋ ಎಂದು ಸದನದಲ್ಲಿ ಈ ವರದಿ ಮಂಡಿಸಿಲ್ಲ. 27ಸಾವಿರ ಎಕರೆ ಜಮೀನು ಕಬಳಿಕೆಯಾಗಿದೆ. 2 ಲಕ್ಷ ಕೋಟಿ ರೂ.ಗೂ ಹೆಚ್ಚು ಆಸ್ತಿಯನ್ನು ಕೆಲ ನಾಯಕರು ಕಬಳಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ಸಿಎಂ ಕುಮಾರಸ್ವಾಮಿ ದೇವಸ್ಥಾನ ಸುತ್ತುತ್ತಿದ್ದು, ಸರಕಾರ ಉರುಳಿ ಬೀಳುವ ಸಂಶಯದಿಂದಲೇ ದೇವರ ಮೊರೆ ಹೋಗಿದ್ದಾರೆ. ಸರಕಾರ ಬೀಳುವ ಮೊದಲು ಮಾಣಿಪ್ಪಾಡಿ ವರದಿ ಮಂಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಕ್ರೀದ್, ರಂಝಾನ್, ಈದ್ ಮಿಲಾದ್ ಹಬ್ಬಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರಾರ್ಥನೆ ಮಾಡಲು ಟೋಪಿ ಹಾಕಿಕೊಳ್ಳುತ್ತಾರೆ. ಆದರೆ, ಆಮೇಲೆ ಅದೇ ಟೋಪಿಯನ್ನು ಅವರ ತಲೆ ಮೇಲೆ ಹಾಕುತ್ತಾರೆಂದು ಟೀಕಿಸಿದರು.

ಮೇಲ್ಮನೆ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕರಾದ ಪ್ರಭು ಚೌವ್ಹಾಣ್, ತೇಜಸ್ವಿನಿಗೌಡ, ವೈ.ಎ.ನಾರಾಯಣಸ್ವಾಮಿ, ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಗೋ.ಮಧುಸೂದನ್ ಸೇರಿದಂತೆ ಇನ್ನಿತರ ಮುಖಂಡರು ಧರಣಿ ಸತ್ಯಾಗ್ರಹದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News