ಲಕ್ಷ್ಮಿ ಹೆಬ್ಬಾಳ್ಕರ್ ರನ್ನು ನಿಯಂತ್ರಿಸದಿದ್ದರೆ ಕಠಿಣ ನಿರ್ಧಾರ ಅನಿವಾರ್ಯ: ಸಚಿವ ರಮೇಶ್ ಜಾರಕಿಹೊಳಿ

Update: 2018-09-06 14:42 GMT

ಬೆಳಗಾವಿ, ಸೆ. 6: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನಿಯಂತ್ರಿಸದಿದ್ದರೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಕೆಪಿಸಿಸಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಾಜಿ ಸಚಿವ, ನನ್ನ ಸಹೋದರ ಸತೀಶ್ ಜಾರಕಿಹೊಳಿಗೆ ಅವಮಾನವಾದರೆ, ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಲಕ್ಷ್ಮೀ ಹೆಬ್ಬಾಳ್ಕರ್ ಈ ಮಟ್ಟಕ್ಕೆ ಇಳಿಯುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದರು.

ಉಪಕಾರ ಮಾಡಿದ್ದನ್ನು ಹೇಳಿಕೊಳ್ಳಬಾರದು. ಆದರೆ, ಅನಿವಾರ್ಯ ಪರಿಸ್ಥಿತಿ, ಹೀಗಾಗಿ ಮಾತನಾಡಬೇಕಿದೆ. 2007-8ರಲ್ಲಿ ಅವರಿಗೆ ಗಾಡ್‌ಫಾದರ್ ಯಾರು ಇದ್ದರೊ ಗೊತ್ತಿಲ್ಲ. ಅವರ ತಂದೆಗೆ ಕ್ಯಾನ್ಸರ್ ಆದಾಗ ಹಣ ನೀಡಿದ್ದು ನಾನೇ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ, ಉಮೇಶ್‌ ಕತ್ತಿ ಯಾರೂ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿಲ್ಲ. ಹೆಬ್ಬಾಳ್ಕರ್ ಅವರು ‘ನೀಚ ರಾಜಕಾರಣ’ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಇವರಿಗೆ ಕಾನೂನಿನ ಅರಿವಿಲ್ಲ. ಇವರು ಜಾರಕಿಹೊಳಿ ಕುಟುಂಬಕ್ಕೆ ಹಣ ನೀಡುವ ಅವಶ್ಯಕತೆಯಿಲ್ಲ ಎಂದರು.

ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ 9 ಮಂದಿ ನಿರ್ದೇಶಕರು ನಮ್ಮ ಜತೆ ಇದ್ದರು. ಆದರೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕುದುರೆ ವ್ಯಾಪಾರ ನಡೆಸಿದ್ದಾರೆಂದು ದೂರಿದ ರಮೇಶ್ ಜಾರಕಿಹೊಳಿ, ಹೆಬ್ಬಾಳ್ಕರ್ ಅವರು ಯಾರು, ಅವರ ಇತಿಹಾಸ ಏನು ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News