ರಾಜಭವನದ ವೈಭವ ಕಣ್ತುಂಬಿಕೊಂಡ ಸಾರ್ವಜನಿಕರು

Update: 2018-09-06 15:00 GMT

ಬೆಂಗಳೂರು, ಸೆ. 6: ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಿದ ಹಿನ್ನೆಲೆಯಲ್ಲಿ ಆಗಸ್ಟ್ 23ರಿಂದ ಸೆ.6ರ ವರೆಗೆ ಹದಿನೈದು ದಿನಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 25ಸಾವಿರಕ್ಕೂ ಅಧಿಕ ಮಂದಿ ರಾಜಭವನದ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ.

ರಾಜಭವನ ವೀಕ್ಷಣೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡಿ ಅತ್ಯಂತ ಖುಷಿಯಿಂದ ರಾಜಭವನವನ್ನು ವೀಕ್ಷಿಸಿದರು. 1840ರ ಬ್ರಿಟಿಷರ ಕಾಲದಲ್ಲಿ 1ಎಕರೆ ಪ್ರದೇಶದಲ್ಲಿನ ರಾಜಭವನ ಕಟ್ಟಡದ ವಿಶಿಷ್ಟ ವಾಸ್ತು ಕೌಶಲ್ಯದಿಂದ ಆಕರ್ಷಕವಾಗಿತ್ತು.

ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ರಾಜಭವನದಲ್ಲಿನ ವರ್ಣರಂಜಿತ ದೀಪಾಲಂಕಾರವನ್ನು ನೋಡಿ ಕಣ್ತುಂಬಿಕೊಂಡರು. ಮೈಸೂರು ಪೋಲಿಸ್ ಬ್ಯಾಂಡ್ ಅವರ ಸುಮಧುರ ವಾದ್ಯಗೋಷ್ಠಿಯನ್ನು ತನ್ಮಯತೆಯಿಂದ ಆಲಿಸಿದರು. ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜಭವನದ ಇತಿಹಾಸದ ಕುರಿತು ಸಾಕ್ಷ್ಯಚಿತ್ರವನ್ನು ವೀಕ್ಷಿಸಿದ ಸಾರ್ವಜನಿಕರು ರಾಜಭವನದ ಇತಿಹಾಸ ಹಾಗೂ ಸಂಪೂರ್ಣ ಮಾಹಿತಿ ಪಡೆದರು.

ರಾಜಭವನ ವೀಕ್ಷಿಸಲು ಬಂದ ಸಾರ್ವಜನಿಕರಿಗೆ ಫೋಟೋ ತೆಗೆಸಿಕೊಳ್ಳಲು ಛಾಯಾಗ್ರಾಹಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಬಿಇಟಿ ಪದವಿ ಕಾಲೇಜು ಹಾಗೂ ಆದರ್ಶ ಕಿವುಡ ಹಾಗೂ ಮೂಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜಭವನವನ್ನು ನೋಡಲು ಅವಕಾಶವನ್ನು ಕಲ್ಪಿಸಲಾಗಿತ್ತು. ಬಿಬಿಎಂಪಿ, ಪೋಲಿಸ್ ಇಲಾಖೆ, ಪ್ರವಾಸೋದ್ಯಮ, ತೋಟಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News