ಲೋಕಾಯುಕ್ತ ಬಲಗೊಳಿಸಲು ಜನಾಂದೋಲನ ಅಗತ್ಯ: ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ

Update: 2018-09-06 15:03 GMT

ಬೆಂಗಳೂರು, ಸೆ.6: ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲು ಜನಾಂದೋಲನ ರೂಪಿಸಬೇಕಾದ ಅಗತ್ಯವಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ತಿಳಿಸಿದರು.

ಗುರುವಾರ ಲಂಚಮುಕ್ತ ಕರ್ನಾಟಕದ ವತಿಯಿಂದ ನಗರದ ಶಾಸನಕರ ಭವನದಲ್ಲಿ ಆಯೋಜಿಸಿದ್ದ ‘ಲೋಕಾಯುಕ್ತ ಬಲಗೊಳಿಸಿ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಲೋಕಾಯುಕ್ತ ಸಂಸ್ಥೆಗೆ ಮುಖ್ಯಮಂತ್ರಿ, ಸಚಿವರನ್ನು ವಿಚಾರಣೆ ಮಾಡುವಂತಹ ಸರ್ವೋಚ್ಚ ಅಧಿಕಾರವಿತ್ತು. ಇದರಿಂದ ಆಳುವ ಪಕ್ಷಕ್ಕೆ ಭ್ರಷ್ಟಾಚಾರಕ್ಕೆ, ಅವ್ಯವಹಾರಗಳಿಗೆ ಬೆಂಬಲ ನೀಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಅದರ ಜಾಗಕ್ಕೆ ಎಸಿಬಿಯನ್ನು ತಂದು ಕೂರಿಸಲಾಗಿದೆ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಲೋಕಾಯುಕ್ತ ಸಂಸ್ಥೆಯೊಂದೆ ಪರಿಹಾರವೆಂದು ಜನತೆಗೆ ಗೊತ್ತಾಗಿದೆ. ಹೀಗಾಗಿ ಸಾರ್ವಜನಿಕರು ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಲು ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಅಂಶವನ್ನೆ ದುರ್ಬಳಕೆ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಲೋಕಾಯುಕ್ತ ಬಲವರ್ಧನೆಯ ಕುರಿತು ಆಶ್ವಾಸನೆ ನೀಡಿ ಜನರ ನಂಬಿಕೆಗೆ ದ್ರೋಹ ಮಾಡಲಾಗುತ್ತಿದೆ ಎಂದು ಅವರು ವಿಷಾದಿಸಿದರು.

ಗಣಿ ಹಗರಣದ ಕುರಿತು ಲೋಕಾಯುಕ್ತ ಸಂಸ್ಥೆ ವರದಿ ಬಿಡುಗಡೆ ಮಾಡಿದಾಗ, ಅದನ್ನು ಬಳಸಿಕೊಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದರು. ನಂತರ ಅವರೆ ರಾಜ್ಯದ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದರು. ಹೀಗಾಗಿ ಯಾವ ರಾಜಕೀಯ ಪಕ್ಷಕ್ಕೂ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಇಚ್ಛೆಯಿಲ್ಲವೆಂದು ಅವರು ಹೇಳಿದರು.

ರಾಜ್ಯದಲ್ಲಿ 1986ರಲ್ಲಿ ಲೋಕಾಯುಕ್ತ ಸಂಸ್ಥೆ ಸ್ಥಾಪನೆಗೊಂಡಿತ್ತಾದರು, ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಎನ್.ವೆಂಕಟಾಚಲ ಅಧಿಕಾರ ವಹಿಸಿಕೊಂಡ ಮೇಲಷ್ಟೆ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆವೊಂದಿದೆ ಎಂದು ಜನತೆಗೆ ಗೊತ್ತಾಗಿದ್ದು. ನಂತರದಲ್ಲಿ ನಾನು ಅಧಿಕಾರ ವಹಿಸಿಕೊಂಡು ಸುಮಾರು 470ಕ್ಕೂ ಹೆಚ್ಚು ಪ್ರಕರಣಗಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿದಂತೆ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ದಾಖಲಿಸಿದ್ದೆ. ದಿನನಿತ್ಯ ಸಾರ್ವಜನಿಕರು ಅಹವಾಲನ್ನು ಸ್ವೀಕರಿಸಿ, ಸಮಸ್ಯೆಯನ್ನು ಬಗೆ ಹರಿಸಿದ್ದೆ ಎಂದು ಅವರು ಹೇಳಿದರು.

ನನ್ನ ಅವಧಿಯ ನಂತರದಲ್ಲಿ ಲೋಕಾಯುಕ್ತ ಸಂಸ್ಥೆಗೆ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನು ನೇಮಿಸಲು ರಾಜ್ಯ ಸರಕಾರಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಉದ್ದೇಶಪೂರ್ವಕವಾಗಿಯೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವಂತಹ ಕೆಲಸ ನಡೆದಿದೆ. ಹೀಗಾಗಿ ಜನಾಂದೋಲನ ಮಾಡುವ ಮೂಲಕವೆ ಜನಪ್ರತಿನಿಧಿಗಳ ಮೇಲೆ ಒತ್ತಡ ತರಬೇಕಿದೆ ಎಂದು ಅವರು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಲೋಕಾಯುಕ್ತರ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ರಾಜಕೀಯೇತರವಾದಂತಹ ಸಮಿತಿಯೊಂದನ್ನು ರಚಿಸಿ ಪ್ರಾಮಾಣಿಕ ಹಾಗೂ ದಕ್ಷ ವ್ಯಕ್ತಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ರಮೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಬಲಗೊಳ್ಳಬೇಕಾದ ಅಗತ್ಯವಿದೆ. ಆ ಮೂಲಕ ಸಮಾಜದಲ್ಲಿ ಸಚ್ಚಾರಿತ್ರ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯವಾಗಬೇಕಿದೆ ಎಂದು ಅಭಿಪ್ರಾಯಿಸಿದರು.

ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಮಾಜದ ಚಿಂತಕರು, ಹೋರಾಟಗಾರರು ಕೈಗೊಳ್ಳುವ ತೀರ್ಮಾನಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಳಿ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ವೇದಿಕೆ ಕಲ್ಪಿಸಿಕೊಡಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್, ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್, ನಿವೃತ್ತ ಡಿಸಿಪಿ ಶ್ರೀಕುಮಾರ್, ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್, ಲಂಚಮುಕ್ತ ಕರ್ನಾಟಕ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News