ರಾಜಕೀಯ ಬೆಂಬಲಿಗರಿಗೆ, ರೌಡಿಗಳಿಗೆ ಕೆಂಪೇಗೌಡ ಪ್ರಶಸ್ತಿ: ರಂಗಕರ್ಮಿ ಕಪ್ಪಣ್ಣ ಆರೋಪ

Update: 2018-09-06 15:09 GMT

ಬೆಂಗಳೂರು, ಸೆ.6: ಕೆಂಪೇಗೌಡ ಪ್ರಶಸ್ತಿಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದ್ದು, ಬೆಂಬಲಿಗರು, ರೌಡಿಗಳನ್ನು ಓಲೈಸಲು ಪ್ರಶಸ್ತಿ ನೀಡುವ ಮೂಲಕ ಕೆಂಪೇಗೌಡರ ಹೆಸರನ್ನು ಮಾರಾಟಕ್ಕಿಟ್ಟಂತಾಗಿದೆ ಎಂದು ಹಿರಿಯ ರಂಗಕರ್ಮಿ ಕಪ್ಪಣ್ಣ ಬೇಸರ ವ್ಯಕ್ತಪಡಿಸಿದರು.

ಗುರುವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸಾಧಕರಿಗೆ ಗೌರವ ಸೂಚಿಸಲು ಕೊಡುವ ಕೆಂಪೇಗೌಡ ಪ್ರಶಸ್ತಿ ಇಂದು ನಗೆಪಾಟಲಿಗೆ ಗುರಿಯಾಗಿದೆ. 500ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿಯನ್ನು ನೀಡಿದ್ದು, ಯಾವುದೇ ಮಾನದಂಡ ಅನುಸರಿಸದೇ ರಾಜಕಾರಣಿಗಳ ಬೆಂಬಲಿಗರಿಗೆ ಪ್ರಶಸ್ತಿಯನ್ನು ನೀಡುವುದರ ಮೂಲಕ ಕೆಂಪೇಗೌಡರ ಹೆಸರಿಗೆ ಕಳಂಕ ತರಲಾಗಿದ್ದು, ಬಿಬಿಎಂಪಿ ಮೇಯರ್ ಹಾಗೂ ಅಧಿಕಾರಿಗಳು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಬಿಬಿಎಂಪಿಯು ಪ್ರಶಸ್ತಿ ಪಡೆದವರ ಅಂತಿಮ ಪಟ್ಟಿಯನ್ನು ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ, ಪೂರ್ವ ತಯಾರಿ ಇಲ್ಲದೆ, ಆಯ್ಕೆಯ ಮಾನದಂಡಗಳಿಲ್ಲದೆ, ಪ್ರಶಸ್ತಿಗಳನ್ನು ಹಂಚಿದ್ದಾರೆ. 50ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿಗಳನ್ನು ನೀಡದೆ ಅದರ ಘನತೆಯನ್ನು ಹಾಳುಗೆಡವಿದ್ದಾರೆ ಎಂದು ಹೇಳಿದರು.

ನವ ಭಾರತಿ ಪ್ರಜಾಸತ್ತಾತ್ಮಕ ಪಕ್ಷದ ಅಧ್ಯಕ್ಷ ಅನಿಲ್ ಶೆಟ್ಟಿ ಮಾತನಾಡಿ, ಈ ಬಾರಿಯ ಪ್ರಶಸ್ತಿಯನ್ನು ರದ್ದುಗೊಳಿಸಿ ತಕ್ಷಣ ಸಮಿತಿಯೊಂದನ್ನು ರಚಿಸಿ, ತನಿಖೆಯನ್ನು ಮಾಡಿಸುವ ಮೂಲಕ ಅರ್ಹ ಸಾಧಕರಿಗೆ ಮಾತ್ರ ಪ್ರಶಸ್ತಿಯನ್ನು ಕೊಟ್ಟು, ಪ್ರಶಸ್ತಿ ಘನತೆಯನ್ನು ಕಾಪಾಡುವಂತೆ ಹೈಕೋರ್ಟಿನ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಕೆಲವರು ಸಾಧಕರೆಂದು ಪ್ರಶಸ್ತಿ ಪಡೆದವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು ಮತ್ತೆ ಕೆಲವರು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡವರು. ಅನೇಕರು ಯಾವುದೇ ಸಾಧನೆ ಮಾಡದಿದ್ದವರು, ಕೇವಲ ಕಾರ್ಪೋರೇಟರ್‌ಗಳ ಮತ್ತು ಶಾಸಕರ ಹಿಂಬಾಲಕರಾಗಿದ್ದಾರೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿದರು.

ಒಬ್ಬ ಕಾರ್ಪೋರೇಟರ್ 20ಕ್ಕೂ ಹೆಚ್ಚು ಜನರಿಗೆ ಪ್ರಶಸ್ತಿ ಕೊಡಿಸಿದ್ದು, ಅನೇಕ ವಿಜೇತರರು ಪಕ್ಷದ ಕಾರ್ಯಕರ್ತರಾಗಿದ್ದಾರೆ. ಮಾಜಿ ಸಚಿವ ರಾಮಲಿಂಗರೆಡ್ಡಿ 8, ಶಿವರಾಮ್ ಬಿಬಿಎಂಪಿಯ ಆಡಳಿತ ಪಕ್ಷದ ನಾಯಕ 20, ಆರ್.ಅಶೋಕ್ 3 ಪ್ರಶಸ್ತಿಗಳನ್ನು ಬೆಂಬಲಿಗರಿಗೆ ಕೊಡಿಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರಾದ ಶಿವಸೂರ್ಯ, ಸಿ.ವಿ.ದೇವರಾಜ್‌ಗೆ ಪ್ರಶಸ್ತಿ ಕೊಡಿಸಿದ್ದಾರೆ. ಅಷ್ಟೇ ಅಲ್ಲದೆ, ಡೆಪ್ಯೂಟಿ ಮೇಯರ್ ಲತಾ ಶ್ರೀನಿವಾಸ್‌ಗೂ ಪ್ರಶಸ್ತಿ ನೀಡಿದ್ದಾರೆ. ಜೈಲಿನಲ್ಲಿದ್ದ ಟಿ.ಆರ್.ತುಳಸಿರಾಮ್‌ಗೆ ಪ್ರಶಸ್ತಿ ದೊರೆತಿರುವುದು ಪ್ರಶಸ್ತಿಯ ಘನತೆಯನ್ನು ಕಡಿಮೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಾಡಪ್ರಭು ಕೆಂಪೇಗೌಡರ ಹೆಸರನ್ನು ರಾಜಕೀಯದ ಸ್ವಾರ್ಥಕ್ಕೆ ಯಾರೂ ಬಳಸಿಕೊಳ್ಳಬಾರದು ಮತ್ತು ಪ್ರಶಸ್ತಿಯ ನೆಪದಲ್ಲಿ ಸಾರ್ವಜನಿಕರ ಹಣವನ್ನು ವ್ಯಯಿಸಬಾರದು. ನಗರದಲ್ಲಿ 1ಕೋಟಿ ಜನಸಂಖ್ಯೆಯಿದೆ 500 ಪ್ರಶಸ್ತಿಗಳೂ ಕಡಿಮೆಯೇ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ, ದೇಶದಲ್ಲಿ 121 ಕೋಟಿ ಜನಸಂಖ್ಯೆಯಿದೆ ಎಂದು ಸಾವಿರಾರು ಜನರಿಗೆ ಪ್ರಶಸ್ತಿ ನೀಡುವುದಿಲ್ಲ ಎಂದು ತಿಳಿಸಿದರು.

ಕೆಂಪೇಗೌಡ ಪ್ರಶಸ್ತಿಗೆ ಕೆಲವು ಮಾನದಂಡಗಳಿರಬೇಕು. ಆಯ್ಕೆ ಸಮಿತಿ ರಚಿಸಬೇಕು. ಮೊದಲೇ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಬೇಕು. ಪ್ರಶಸ್ತಿ ಪಡೆದವರು ಕ್ರಿಮಿನಲ್ ಆರೋಪದಿಂದ ಮುಕ್ತರಾಗಿರಬೇಕು.

-ಅನಿಲ್ ಶೆಟ್ಟಿ, ನವ ಭಾರತಿ ಪ್ರಜಾಸತ್ತಾತ್ಮಕ ಪಕ್ಷದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News