ದಲಿತ ಸಂಘಟನೆಗಳೆಲ್ಲಾ ಒಂದಾಗಿ ಬಿಜೆಪಿಯನ್ನು ಸೋಲಿಸಿ: ಜಿಗ್ನೇಶ್ ಮೇವಾನಿ ಕರೆ

Update: 2018-09-06 15:28 GMT

ಬೆಂಗಳೂರು, ಸೆ.6: ಮುಂದಿನ ಲೋಕಸಭಾ ಚುನಾವಣೆ ವೇಳೆ ದಲಿತ, ಆದಿವಾಸಿ, ಮಹಿಳೆಯರು ಸೇರಿದಂತೆ ಎಲ್ಲರ ಅಜೆಂಡಾ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುವುದೇ ಆಗಿರಬೇಕು. ಅದಕ್ಕಾಗಿ ಎಲ್ಲ ದಲಿತ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ದಲಿತ ನಾಯಕ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಕರೆ ನೀಡಿದ್ದಾರೆ.

ಗುರುವಾರ ನಗರದ ಸೆಂಟ್ರಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ಭಾರತ ದಲಿತ ಹೋರಾಟಗಾರರ ಸಮಾಲೋಚನಾ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಕಣ್ಣುಗಳ ಮೇಲೆ ಪಟ್ಟಿ ಕಟ್ಟಲಾಗಿದೆ. ಅದನ್ನು ಬಿಡಿಸಿಕೊಂಡು ಎಲ್ಲರೂ ಸಂಘಟಿತರಾಗುವ ಮೂಲಕ ಕೋಮುವಾದಿ ಶಕ್ತಿಗಳನ್ನು ಸೋಲಿಸಬೇಕಿದೆ. ನಾನು ಪದೇ ಪದೇ ಇದನ್ನೇ ಹೇಳುತ್ತಿದ್ದೇನೆ, ಕೋಮುವಾದಿಗಳು ಸೋಲುವವರೆಗೂ ಇದನ್ನೇ ಹೇಳುತ್ತೇನೆ ಎಂದರು.

ಪ್ರತಿನಿತ್ಯ ದಲಿತ, ದಮನಿತ, ಪ್ರಗತಿಪರರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಲೋಹಿಯಾವಾದ ಇಟ್ಟುಕೊಂಡು ಏನು ಮಾಡಲು ಸಾಧ್ಯ. ನಮ್ಮ ನಮ್ಮ ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ ಪ್ರತ್ಯೇಕ ಬ್ಯಾನರ್ ಇಟ್ಟುಕೊಂಡು ಇಂದಿಗೂ ಚಳವಳಿ ಮಾಡುತ್ತಿದ್ದೇವೆ. ಅಲ್ಲದೆ, ಕೋಮುವಾದಿಗಳಿಗೆ ಬಲಿಯಾಗುತ್ತಿದ್ದೇವೆ ಎಂದು ಹೇಳಿದರು.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ಕಲಬುರ್ಗಿ, ದಾಭೋಲ್ಕರ್ ಸೇರಿದಂತೆ ಹಲವರ ಹತ್ಯೆಯಾಯಿತು. ಉಮರ್ ಖಾಲಿದ್ ಮೇಲೆ ಗುಂಡಿನ ದಾಳಿಯಾಯಿತು. ನನಗೆ ಕೊಲೆ ಬೆದರಿಕೆಗಳಿವೆ. ಅಲ್ಲದೆ, ಫ್ಯಾಸಿಸಂ ಇಂದಿನ ದೊಡ್ಡ ಅಪಾಯಕಾರಿ ಎಂದು ನಾವೇ ಒಪ್ಪಿಕೊಂಡಿದ್ದೇವೆ. ಆದರೂ, ಕೋಮುವಾದಿ, ಫ್ಯಾಸಿಸಂ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಲು ಮುಂದಾಗುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ದಲಿತ ಮುಖಂಡರನ್ನು ಬಂಧಿಸಲಾಗುತ್ತಿದೆ. ಭೀಮವಾದವನ್ನು ಮುಂದಿಟ್ಟುಕೊಂಡು ದಲಿತರ, ಆದಿವಾಸಿಗಳ ಪರವಾಗಿ ಹೋರಾಡುವವರಿಗೆ ನಕ್ಸಲರ ಪಟ್ಟ ಕಟ್ಟಿ ಜೈಲಿಗೆ ತಳ್ಳಲಾಗುತ್ತಿದೆ. ಆದರೂ ದಲಿತ ಸಂಘಟನೆಗಳು ಹೋರಾಟ ನಡೆಸದೆ ಸುಮ್ಮನಿವೆ. ಹೀಗೆ ನಿಧಾನಗತಿಯಲ್ಲಿ ಸಾಗುತ್ತಿರುವ ದಲಿತ ಚಳವಳಿಯ ಬಗ್ಗೆ ಬೇಸತ್ತುಹೋಗಿದೆ. ನಾನು ಭಾಷಣ ಮಾಡಿದಾಗ ಚಪ್ಪಾಳೆ ಹೊಡೆಯುವವರು, ಸೆಲ್ಪಿ ತೆಗೆದುಕೊಳ್ಳುವವರು ಹೋರಾಟದ ವಿಚಾರ ಬಂದಾಗ ಮಾತ್ರ ಮೌನವಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿಯ ಮುಖಂಡ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಿ ವರ್ಷಕ್ಕೂ ಅಧಿಕ ದಿನಗಳಾಗುತ್ತಿವೆ. ಆದರೂ ದೇಶದ ಎಲ್ಲ ದಲಿತರು ಒಂದೆಡೆ ಸೇರಿ ಹೋರಾಟ ನಡೆಸಲಿಲ್ಲ. ರಾಜ್ಯಗಳಲ್ಲಿ ದಲಿತರ ಮೇಲೆ ಹಲ್ಲೆ ನಡೆದಾಗ ಸಂಘಟನೆಗಳು ಅಲ್ಲೇ ಪ್ರತಿಭಟನೆ ಮಾಡುತ್ತವೆ. ಆದರೆ ಬೇರೆ ರಾಜ್ಯಗಳಲ್ಲಿ ಅನ್ಯಾಯವಾದಾಗ ಅಲ್ಲಿಗೆ ಬಂದು ಹೋರಾಟ ನಡೆಸದೆ ಸುಮ್ಮನಿರುತ್ತವೆ. ಇದರಿಂದಾಗಿ ದಲಿತ ಚಳವಳಿಗೆ ಹಿನ್ನಡೆಯಾಗುತ್ತಿದೆ. ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳ ದಲಿತರು ಭಿನ್ನತೆ ಮರೆತು ಒಂದಾಗಬೇಕು. ಈ ಮೂಲಕ ನವಭಾರತ ನಿರ್ಮಿಸಬೇಕು ಎಂದು ಕರೆ ನೀಡಿದರು.

ಪ್ರಧಾನಿ ಮೋದಿ ದೇಶದಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಅವರ ತಪ್ಪುಗಳನ್ನು ಎತ್ತಿ ತೋರಿಸುವ ಶಕ್ತಿ ಇರುವುದು ದಲಿತ ಚಳವಳಿಗೆ ಮಾತ್ರ. ಇಂತಹ ಸಂದರ್ಭದಲ್ಲಿ ಇದನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ದಲಿತರ ಮೇಲೆ ಸುಳ್ಳು ಆಪಾದನೆಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ನನ್ನನ್ನು ಕೊಲ್ಲಲು ಮುಂದಾಗಿದ್ದಾರೆ ಎನ್ನುವ ಮೂಲಕ ದಲಿತರನ್ನು ನಕ್ಸಲರು ಎತ್ತಿಕಟ್ಟುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು.

ಊನಾ ಘಟನೆಯ ನಂತರ ಬಂದ ಲಕ್ಷಾಂತರ ಜನರನ್ನು ಯಾವ ನಕ್ಸಲರು ಕಳಿಸಿದ್ದರು? ರೋಹಿತ್ ವೇಮುಲಾ ಸಾವಿನ ನಂತರ ಸೇರಿದವರನ್ನು ಯಾವ ಮಾವೋವಾದಿಗಳು ಕಳಿಸಿದ್ದರು? ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ವಿರುದ್ಧ ಹೋರಾಡಿದವರನ್ನು ಯಾರು ಕಳಿಸಿದ್ದರು ಎಂದು ಪ್ರಶ್ನಿಸಿದ ಅವರು, ಎಲ್ಲರೂ ಸ್ವಯಂ ಪ್ರೇರಣೆಯಿಂದ ಚಳವಳಿಗೆ ಬಂದವರು. ಆದರೆ, ಕೇಂದ್ರ ಸರಕಾರ ತಮ್ಮ ವಿರುದ್ಧ ಧ್ವನಿ ಎತ್ತಿದವರ ಮೇಲೆ ದಾಳಿ ಮಾಡುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮುಂದಿನ ಗುರಿ ಆರೆಸ್ಸೆಸ್ ಹಾಗೂ ಬಿಜೆಪಿಯನ್ನು ಸೋಲಿಸುವುದಾಗಿರಬೇಕು ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಉಳಿದಿವೆ. ದಲಿತರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ದೇಶದಾದ್ಯಂತ ಸಂಚರಿಸಿ ಹೋರಾಟ ಮಾಡಿ ಬಿಜೆಪಿ ಗೆಲ್ಲದಂತೆ ಮಾಡಬೇಕು. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಶೇ.50 ರಷ್ಟೂ ವಾಕ್ ಸ್ವಾತಂತ್ರ್ಯ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.

ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ, ನ್ಯಾಯಾಂಗದಲ್ಲಿ ದಲಿತ ನ್ಯಾಯಮೂರ್ತಿಗಳು ಇಲ್ಲದಿದ್ದರೆ ದಲಿತರಿಗೆ ನ್ಯಾಯ ದೊರೆಯಲು ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ದಲಿತರನ್ನು ತುಂಬಬೇಕು ಎಂದು ಹೇಳಿದರು.

ನ್ಯಾಯಾಂಗದಲ್ಲಿ ದಲಿತ ಮೀಸಲು ತರಲು ಹೋದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಬೇರೆಯವರು ನ್ಯಾಯಪೀಠದಲ್ಲಿದ್ದರೆ ಈ ತಿದ್ದುಪಡಿಗೆ ಅವಕಾಶ ನೀಡುವುದಿಲ್ಲ. ಹೀಗಾಗಿ ಮೊದಲು ದಲಿತರನ್ನು ನ್ಯಾಯಾಂಗದಲ್ಲಿ ಸೇರಿಸಿ ಬಳಿಕ ಮೀಸಲು ತರುವ ಪ್ರಯತ್ನ ಮಾಡಬೇಕು ಎಂದು ನುಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ, ದಲಿತ ಮುಖಂಡ ಇಂದೂಧರ ಹೊನ್ನಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಎಸ್ಸಿ-ಎಸ್ಟಿ ಉಪ ಯೋಜನೆಗೆ ಮೀಸಲಿಟ್ಟಿರುವ ಹಣವನ್ನು ಕೇಂದ್ರ ಸರಕಾರ ತಮ್ಮ ಯೋಜನೆಗಳ ಪ್ರಚಾರದ ಜಾಹೀರಾತಿಗಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ತಡೆಯಲು ತೀವ್ರ ಹೋರಾಟ ಅನಿವಾರ್ಯವಾಗಿದೆ. ಈ ಹಣವನ್ನು ಸರಿಯಾದ ಮಾರ್ಗದಲ್ಲಿ ಬಳಕೆ ಮಾಡಿಕೊಂಡರೆ ಒಂದು ದಶಕದಲ್ಲಿ 40 ಲಕ್ಷ ಕೋಟಿ ರೂ.ಗಳು ದಲಿತರಿಗೆ ಸಿಗುತ್ತದೆ.

-ಜಿಗ್ನೇಶ್ ಮೇವಾನಿ, ದಲಿತ ಮುಖಂಡ ಹಾಗೂ ಶಾಸಕ

ಹಕ್ಕೊತ್ತಾಯಗಳು

-ಅಟ್ರಾಸಿಟಿ ತಡೆ ಕಾಯ್ದೆಯನ್ನು ರಕ್ಷಿಸಿ ಬಲಪಡಿಸುವುದು.

-ದಲಿತ ಹೋರಾಟಗಾರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯುವುದು.

-ಉತ್ತರ ಪ್ರದೇಶದ ಜೈ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಅವರನ್ನು ಬಿಡುಗಡೆಗೊಳಿಸುವುದು.

-ದಲಿತ ನೌಕರರಿಗೆ ನೀಡುತ್ತಿದ್ದ ಭಡ್ತಿ ಮೀಸಲನ್ನು ಅಡೆತಡೆಯಿಲ್ಲದೆ ಜಾರಿಗೊಳಿಸುವುದು.

-ಖಾಸಗಿ ಕ್ಷೇತ್ರದಲ್ಲಿ ದಲಿತರಿಗೆ ಮೀಸಲು ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News