ಸಲಿಂಗಕಾಮ ತೀರ್ಪಿನ ವಿರುದ್ಧ ಪ್ರತಿಭಟನೆಗೆ ಸಜ್ಜು

Update: 2018-09-07 04:40 GMT

ಹೊಸದಿಲ್ಲಿ, ಸೆ.7: ಸಲಿಂಕಕಾಮವನ್ನು ಸಕ್ರಮಗೊಳಿಸಿ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದೇಶದ ಎಲ್ಲೆಡೆ ಸಂಭ್ರಮಾಚರಣೆ ನಡೆಯುತ್ತಿರುವ ನಡುವೆಯೇ, ಎಲ್ಲ ಪಂಥಗಳ ಮುಸ್ಲಿಂ ಧರ್ಮಗುರುಗಳು, ಇದರ ವಿರುದ್ಧ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸಲಿಂಗಕಾಮವು ಧರ್ಮ ಮತ್ತು ಮಾನವತೆಗೆ ವಿರುದ್ಧ ಎಂದು ಅವರು ಬಣ್ಣಿಸಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಪದಾಧಿಕಾರಿಗಳು ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಯನ್ನೂ ನಿರಾಕರಿಸಿಲ್ಲ.

ಜಮಾಅತ್ ಉಲಮಾ ಹಿಂದ್ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹ್ಮೂದ್ ಮದನಿ, "ಈ ತೀರ್ಪು ಲೈಂಗಿಕ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಮತ್ತು ಸುಪ್ರೀಂಕೋರ್ಟ್ ತನ್ನ 2013ರ ತೀರ್ಪಿಗೇ ಬದ್ಧವಾಗಿರಬೇಕಿತ್ತು" ಎಂದು ಅಭಿಪ್ರಾಯಪಟ್ಟಿದ್ದಾರೆ. ದಿಲ್ಲಿ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ಸಲಿಂಗಕಾಮವನ್ನು ಅಪರಾಧವಲ್ಲ ಎಂದು ಪರಿಗಣಿಸಿರುವುದನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ 2013ರಲ್ಲಿ ಸಲಿಂಗಕಾಮ ಅಪರಾಧ ಕೃತ್ಯ ಎಂದು ತೀರ್ಪು ನೀಡಿತ್ತು.

"ಸಲಿಂಗಕಾಮ ನಿಸರ್ಗದ ನಿಯಮಕ್ಕೆ ವಿರುದ್ಧ. ಇದು ನೈತಿಕ ಅಧಃಪತನಕ್ಕೆ ಮತ್ತು ಸಾಮಾಜಿಕ ಅವ್ಯವಸ್ಥೆ ಹಾಗೂ ಲೈಂಗಿಕ ಅಪರಾಧ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ಲಜ್ಜೆಗೇಡಿ ಕೃತ್ಯ ಕುಟುಂಬ ವ್ಯವಸ್ಥೆಯನ್ನು ಹಾಳು ಮಾಡಲಿದ್ದು, ಮಾನವ ಕುಲದ ಪ್ರಗತಿಗೆ ಮಾರಕ. ಸಲಿಂಗಕಾಮ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವವರಿಗಾಗಿ ಇಡೀ ಸಮಾಜವನ್ನು ಲೈಂಗಿಕ ಅರಾಜಕತೆಗೆ ತಳ್ಳಲಾಗದು" ಎಂದು ಮದನಿ ಹೇಳಿದ್ದಾರೆ. ಪ್ರತೀ ಪವಿತ್ರ ಗ್ರಂಥಗಳು ಕೂಡಾ ಸಲಿಂಗಕಾಮವನ್ನು ಅಸಹಜ ಲೈಂಗಿಕತೆ ಎಂದು ಬಣ್ಣಿಸಿವೆ' ಎಂದು ಅವರು ಪ್ರತಿಪಾದಿಸಿದ್ದಾರೆ.
 ಎಐಎಂಪಿಎಲ್ ಮಂಡಳಿಯ ಸದಸ್ಯ ಕಮಲ್ ಫರೂಕಿ, "ಅಪರಾಧವಾಗಿ ಪರಿಗಣಿಸುವುದು ಒಳ್ಳೆಯದಲ್ಲ. ಆದರೆ ಅದೇ ವೇಳೆ, ಇದು ಇಡೀ ಸಮಾಜವನ್ನು ಹಾಳು ಮಾಡುತ್ತದೆ. ದೇಶದ ಸಂಸ್ಕೃತಿಯನ್ನು ಇದು ಹಾಳು ಮಾಡುತ್ತದೆ. ಆದ್ದರಿಂದ ಮಂಡಳಿಯು ಮುಸ್ಲಿಮರಿಗಾಗಿ ಮಾತ್ರವಲ್ಲದೇ, ದೇಶದ ನಾಗರಿಕರಿಗಾಗಿ ಪಾತ್ರ ವಹಿಸಬೇಕಾಗಿದೆ" ಎಂದು ಹೇಳಿದ್ದಾರೆ.

ಶಿಯಾ ಚಿಂತಕ ಮತ್ತು ಸಾಮಾಜಿಕ ಮುಖಂಡ ಮೌಲಾನಾ ಕಲ್ಬೆ ರಶೀದ್, "ಸಲಿಂಗಕಾಮ ಕಾನೂನುಬಾಹಿರ ಮಾತ್ರವಲ್ಲ. ಮಹಾಪಾಪ" ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News