ಅಮೆರಿಕದಲ್ಲಿ ಉದ್ಯೋಗ: ವಿದೇಶಿ ವಿದ್ಯಾರ್ಥಿಗಳ ಆಸೆಗೆ ಟ್ರಂಪ್ ತಣ್ಣೀರು

Update: 2018-09-08 04:00 GMT

ಮುಂಬೈ, ಸೆ.8: ಎಚ್-1ಬಿ ವೀಸಾ ಅರ್ಜಿಗಳ ಪ್ರೀಮಿಯಂ ಸಂಸ್ಕರಣಾ ವ್ಯವಸ್ಥೆಯನ್ನು ಅಮೆರಿಕದ ಪೌರತ್ವ ಮತ್ತು ಇಮಿಗ್ರೇಶನ್ ಸೇವಾ ವಿಭಾಗ (ಯುಎಸ್‌ಸಿಐಎಸ್) ಅಮಾನತುಪಡಿಸಿರುವುದರಿಂದ ಅಮೆರಿಕದಲ್ಲಿ ಉದ್ಯೋಗ ಪಡೆಯುವ ವಿದೇಶಿ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.

ಯುಎಸ್‌ಸಿಐಎಸ್ ನಡೆಯಿಂದಾಗಿ ಎಚ್-1ಬಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗುವ ಉದ್ಯೋಗದಾತರಿಗೂ ಆಘಾತವಾಗಿದೆ. ಪ್ರೀಮಿಯಂ ಸಂಸ್ಕರಣಾ ವ್ಯವಸ್ಥೆ ಇಲ್ಲದಿರುವುದರಿಂದ, ಅಕ್ಟೋಬರ್ 1ರಿಂದ ಅಮೆರಿಕದಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿದ್ದ "ಕ್ಯಾಪ್ ಗ್ಯಾಪ್" ಅವಧಿಯಲ್ಲಿರುವ ಸಹಸ್ರಾರು ಮಂದಿ ವಿದೇಶೀಯರ ಸ್ಥಿತಿ ಅತಂತ್ರವಾಗಿದೆ.

"ಎಚ್-1ಬಿ ವ್ಯವಸ್ಥೆಯ ಪ್ರಸ್ತಾವಿತ ಬದಲಾವಣೆಯ ವೇಳೆ ಸಮತೋಲಿತ ನಿರ್ಧಾರ ಕೈಗೊಳ್ಳುವಂತೆ ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪೆಯೊ ಅವರಿಗೆ 2+2 ಮಾತುಕತೆ ವೇಳೆ ಮನವಿ ಮಾಡಿದ್ದೇನೆ" ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಎಚ್-1ಬಿ ವೀಸಾ ನಾನ್ ಇಮಿಗ್ರೆಂಟ್ ವೀಸಾ ಆಗಿದ್ದು, ಇದರಡಿ ಅಮೆರಿಕನ್ ಕಂಪೆನಿಗಳು ವಿದೇಶಿ ಕೆಲಸಗಾರರನ್ನು ವಿಶೇಷ ವೃತ್ತಿಗಳಲ್ಲಿ ನೇಮಕ ಮಾಡಿಕೊಳ್ಳಬಹುದಾಗಿದೆ. ಈ ಮೊದಲಿನ ನಿರ್ಧಾರದಂತೆ 2018ರ ಸೆಪ್ಟೆಂಬರ್ 10ರವರೆಗೆ ಮಾತ್ರ ಪ್ರೀಮಿಯಂ ಸಂಸ್ಕರಣಾ ವ್ಯವಸ್ಥೆ ಅಮಾನತು ಮಾಡಲಾಗಿತ್ತು. ಆದರೆ ಈ ಅವಧಿಯನ್ನು 2019ರ ಫೆಬ್ರವರಿ 19ರವರೆಗೆ ವಿಸ್ತರಿಸಿರುವುದು ಸಮಸ್ಯೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ಎಚ್-1ಬಿ ವೀಸಾ ಅರ್ಜಿಗಳ ಸಂಸ್ಕರಣಾ ಅವಧಿ ಆರು ತಿಂಗಳು. ಆದರೆ ಪ್ರೀಮಿಯಂ ಸಂಸ್ಕರಣಾ ವ್ಯವಸ್ಥೆಯಡಿ ಪ್ರಾಯೋಜಕ ಕಂಪೆನಿಗಳು ಹೆಚ್ಚುವರಿ ಶುಲ್ಕ ಪಾವತಿಸಿದಲ್ಲಿ ಕೇವಲ 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.

ಕ್ಯಾಪ್ ಗ್ಯಾಪ್ ಅವಧಿ ಎಂದರೆ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಎಫ್-1 ವೀಸಾ ಸ್ಥಾನಮಾನ ಮುಗಿದು ಎಚ್-1ಬಿ ಆರಂಭವಾಗುವ ಅವಧಿಯ ಅಂತರ, ವಿದೇಶಿ ವಿದ್ಯಾರ್ಥಿಗಳು ಈ 12 ತಿಂಗಳ ಅವಧಿಯಲ್ಲಿ ಐಚ್ಛಿಕ ಪ್ರಾಯೋಗಿಕ ತರಬೇತಿ (ಈಪಿಟಿ) ಪಡೆಯಲು ಅವಕಾಶವಿದೆ. ಇದರ ಅನ್ವಯ ಅಮೆರಿಕದಲ್ಲಿ ಕೆಲಸ ಮಾಡಬಹುದಾಗಿದೆ. ವಿಜ್ಞಾನ, ತಂತ್ರಜ್ಞಾನ, ಗಣಿತ ಹಾಗೂ ಎಂಜಿನಿಯರಿಂಗ್ ಪದವಿ ಪಡೆದವರು ಹೆಚ್ಚುವರಿ 24 ತಿಂಗಳು ಕೆಲಸ ಮಾಡಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News